ಚನ್ನಪಟ್ಟಣ: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಹಣ, ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನವನ್ನೇ ದೋಚಿದ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ದಲಿತ ಸಮುದಾಯದ ಮತಗಳನ್ನು ಕೇಳುವ ನೈತಿಕ ಹಕ್ಕಿಲ್ಲ. ನೀಚ ಕಾಂಗ್ರೆಸ್ಸಿಗರಿಗೆ ದಲಿತ ಕೇರಿಗಳಿಗೆ ಪ್ರವೇಶಿಸುವ ಯೋಗ್ಯತೆಯೂ ಇಲ್ಲ ಎಂದು ಪ್ರದೇಶ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹರಿಹಾಯ್ದರು.
ಅಂಬೇಡ್ಕರ್ ಅವರಿಂದಾಗಿ ದಲಿತ ಸಮುದಾಯ ಜಾಗೃತಗೊಂಡಿದೆ. ಅಂಬೇಡ್ಕರ್ ಅವರಿಗೆ ಮಾಡಿದ ಮೋಸವನ್ನು ಅಂಬೇಡ್ಕರ್ ಅನುಯಾಯಿಗಳಾದ ನಮ್ಮ ದಲಿತರಿಗೆ ಮಾಡಲಾಗುವುದಿಲ್ಲ. ಇದೀಗ ಉಪ ಚುನಾವಣೆಗೆ ಬರುತ್ತಿರುವ ಡಜನ್ ಸಚಿವರು, 30 ಕಾಂಗ್ರೆಸ್ ಶಾಸಕರನ್ನೂ ಚನ್ನಪಟ್ಟಣದಲ್ಲಿ ದಲಿತರು ಪ್ರತಿ ಊರಿನಲ್ಲೂ ಪ್ರಶ್ನೆ ಮಾಡಲು ಸಿದ್ಧರಾಗಿದ್ದಾರೆ. ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ತಿಳಿಸಿದರು.
ಭಾರತದ ಇತಿಹಾಸದಲ್ಲೇ ದಲಿತ ಕೇರಿಗಳಿಗೆ ಎಸ್‌ಇಪಿ, ಟಿಎಸ್‌ಪಿ ಅನುದಾನದಡಿ ಕಾಂಕ್ರೀಟ್ ರಸ್ತೆ ಮಂಜೂರು ಮಾಡಿದವರು ಕುಮಾರಸ್ವಾಮಿ ಅವರೇ ಹೊರತು ಕಾಂಗ್ರೆಸ್ ಸರ್ಕಾರವಲ್ಲ. ಯೋಗೇಶ್ವರ್ ನಿರ್ಲಕ್ಷ್ಯದ ಕಾರಣ ಸ್ಥಗಿತಗೊಂಡಿದ್ದ ಚನ್ನಪಟ್ಟಣ ಅಂಬೇಡ್ಕರ್ ಭವನಕ್ಕೂ 2 ಕೋಟಿ ರು. ಅನುದಾನ ನೀಡಿ, ಕಾಮಗಾರಿ ಪೂರ್ಣಗೊಳಿಸಿದ ಕೀರ್ತಿ ಕುಮಾರಸ್ವಾಮಿ ಅವರಿಗೇ ಸಲ್ಲಬೇಕು ಎಂದರು.ಯಾರ ಉದ್ಧಾರಕ್ಕೆ ಪಕ್ಷಾಂತರ? :
ಯೋಗೇಶ್ವರ್ ಅವರು ಹಿಂದೆ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ಅಂಬೇಡ್ಕರ್ ಭವನಗಳಿಗೆ ಮಂಜೂರಾಗಿದ್ದ ಅನುದಾನ ತಡೆಗೆ ಪತ್ರ ಕೊಟ್ಟಿದ್ದರು. ಅವರು ಎಂದಿಗೂ ದಲಿತ ಸಮುದಾಯದ ಹಿತ ಕಾಯ್ದವರಲ್ಲ. ದಲಿತರ ಅಭ್ಯುದಯಕ್ಕಾಗಿ ಒಂದೇ ಒಂದು ಕಾರ್ಯಕ್ರಮವನ್ನೂ ಇಲ್ಲಿ ಜಾರಿಗೊಳಿಸಿಲ್ಲ. ಹೀಗಾಗಿ ಅವರಿಗೆ ದಲಿತರ ವೋಟು ಕೇಳುವ ಹಕ್ಕಿಲ್ಲ ಎಂದು ಕಿಡಿ ಕಾರಿದರು.
ಚನ್ನಪಟ್ಟಣಕ್ಕೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರಿಬ್ಬರ ಕೊಡುಗೆಗಳು ಮತ್ತು ಸಾಧನೆಗಳೇ ಇಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಅವರಿಗೆ ಶ್ರೀರಕ್ಷೆಯಾಗಿವೆ. ಪ್ರಸಕ್ತ ಉಪ ಚುನಾವಣೆಯಲ್ಲಿ ನಿಖಿಲ್ ಅವರ ಗೆಲುವು ನೂರಕ್ಕೆ ಇನ್ನೂರರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಕ್ಸ್..............
ಚನ್ನಪಟ್ಟಣ: ತಾಲೂಕಿನಲ್ಲಿ ಯೋಗೇಶ್ವರ್ ಒಬ್ಬ ಸಾಮಾನ್ಯ ಶಾಸಕನ ಜವಾಬ್ದಾರಿ, ಕರ್ತವ್ಯಗಳನ್ನಷ್ಟೇ ನಿರ್ವಹಿಸಿದ್ದಾರೆ. ಒಂದೊಮ್ಮೆ ಎಚ್.ಡಿ.ದೇವೇಗೌಡ ಅವರು ಇಗ್ಗಲೂರು ಬ್ಯಾರೇಜ್ ನಿರ್ಮಾಣ ಮಾಡದೇ ಹೋಗಿದ್ದರೆ, ಯೋಗೇಶ್ವರ್ ಅವರು ಎಲ್ಲಿಂದ ಏತ ನೀರಾವರಿ ಯೋಜನೆ ಸಾಕಾರಗೊಳಿಸಲು ಸಾಧ್ಯವಾಗುತ್ತಿತ್ತು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನೆ ಮಾಡಿದರು.
ಕಾವೇರಿ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ 18 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲು ದೇವೇಗೌಡರ ಹೋರಾಟ ಕಾರಣ. ಹೆಚ್ಚುವರಿ ನೀರಿನ ಅವಕಾಶ ಬಳಸಿಕೊಳ್ಳಲೆಂದೇ ಕುಮಾರಸ್ವಾಮಿ ಅವರು 2018ರಲ್ಲಿ ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ನೀರಾವರಿ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು 540 ಕೋಟಿ ರು. ವೆಚ್ಚದಲ್ಲಿ ಮಂಜೂರು ಮಾಡಿದರು. ಆ ಕಾಮಗಾರಿ ಇನ್ನೇನು ಅಂತಿಮ ಹಂತಕ್ಕೆ ತಲುಪಿದ್ದು, ಇಡೀ ರಾಮನಗರ ಜಿಲ್ಲೆಗೆ ವರದಾನವಾಗಲಿದೆ ಎಂದರು.
ಕಾವೇರಿ ಕೊಳ್ಳದಲ್ಲಿ ಅತಿವೃಷ್ಟಿ ಸಂಭವಿಸಿ, ಪ್ರವಾಹವೇ ಸಂಭವಿಸಿತು. ತಮಿಳುನಾಡಿಗೆ ನೂರಾರು ಟಿಎಂಸಿ ನೀರು ಹರಿದಾಗಲೂ ಶಿಂಷಾದಲ್ಲಿ ಹನಿ ನೀರು ಇರಲಿಲ್ಲ. ಹೀಗಾಗಿ ಶಿಂಷಾ ನದಿ ಅವಲಂಬಿತ ಏತ ನೀರಾವರಿ ಯೋಜನೆಗಿಂತ ಸತ್ತೇಗಾಲ ಕಾವೇರಿ ಯೋಜನೆ ಹೆಚ್ಚು ಉಪಯುಕ್ತವಾಗಲಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ಕುಮಾರಸ್ವಾಮಿ ಅವರು ಯೋಜನೆ ಸಾಕಾರಕ್ಕೆ ಅಡಿಗಲ್ಲು ಹಾಕಿದ್ದಾರೆ. ಭವಿಷ್ಯದಲ್ಲಿ ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಬವಣೆಯೂ ನೀಗಲಿದ್ದು, ಸಮೃದ್ಧ ನೀರಾವರಿ ಪ್ರದೇಶ ಇದಾಗಲಿದೆ ಎಂದು ಅನ್ನದಾನಿ ಹೇಳಿದರು.
1ಕೆಆರ್ ಎಂಎನ್ 7.ಜೆಪಿಜಿಪ್ರದೇಶ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.