ಕನ್ನಡಪ್ರಭ ವಾರ್ತೆ ತುಮಕೂರುಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು, ಈ ಸರ್ಕಾರದ ಎರಡು ವರ್ಷದ ಸಾಧನೆಯಲ್ಲಿ ಯಾವುದೇ ಜನಪರ ಯೋಜನೆ ಜಾರಿಗೆ ಬಂದಿಲ್ಲ, ಕೇವಲ ಗ್ಯಾರಂಟಿಗಳಿಗೆ ಮಾತ್ರ ಸೀಮಿತವಾಗಿದೆ. ಈ ಸರ್ಕಾರದ ಸಾಧನೆ ಶೂನ್ಯ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಟೀಕಿಸಿದ್ದಾರೆ.ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೪ ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲಿಟ್ಟಿದ್ದಾರೆ. ಜಾಹೀರಾತು, ಬಿಟ್ಟಿ ಭಾಗ್ಯದ ಸರ್ಕಾರ ಇದು, ಜನಪರ ಸರ್ಕಾರವಲ್ಲ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟ ಎಂದು ಬಜೆಟ್‌ನಲ್ಲಿ ಹೇಳಿದೆ. ಆದರೆ ಸರ್ವಜನಾಂಗಕ್ಕೆ ಪೂರಕವಾದ ಯಾವುದೇ ಯೋಜನೆ ಜಾರಿಯಾಗಿಲ್ಲ. ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಭಾಗ್ಯಗಳಿಗೆ ಸೀಮಿತವಾಗಿರುವ ಈ ಸರ್ಕಾರ ದಿವಾಳಿಯಾಗಿದೆ ಎಂದರು.ಆಪರೇಷನ್ ಸಿಂದೂರ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಏಕಾಭಿಪ್ರಾಯ ವ್ಯಕ್ತವಾಗಿಲ್ಲ. ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಗೊಂದಲ ಉಂಟು ಮಾಡಿವೆ. ಕಾಂಗ್ರೆಸ್ ಮತ್ತು ಇಂಡಿಯಾ ಕೂಟ ಮುಚ್ಚುವ ಸ್ಥಿತಿ ಬಂದಿದೆ ಎಂದು ಅವರು ಹರಿಹಾಯ್ದರು. ಈ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಗುತ್ತಿಗೆದಾರರಿಗೆ ಹಣ ಬಂದಿಲ್ಲ. ಹೀಗಾಗಿ ಕಾಮಾಗರಿಗಳು ನಡೆಯುತ್ತಿಲ್ಲ. ಯಾವುದೇ ಅಭಿವೃದ್ಧಿ ಇಲ್ಲದೇ ಯಾವ ಆಧಾರದ ಮೇಲೆ ಎರಡು ವರ್ಷದ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.ಕೈ ಸರ್ಕಾರದಲ್ಲಿ ಶೇ. 90 ರಷ್ಟು ಶಾಸಕರು ಸರ್ಕಾರದ ವಿರುದ್ಧವೇ ನಡೆಯುತ್ತಿದ್ದಾರೆ. ಇದೊಂದು ಬೂಟಾಟಿಕೆ ಸರ್ಕಾರ. ಸಿದ್ದರಾಮಯ್ಯ ಅವರು 2ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ 7 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಮಾವೇಶ ಮಾಡುತ್ತಿರುವ ಸಿದ್ದರಾಮಯ್ಯ ಅವರು ನಾವು ಅಧಿಕಾರ ಸರಿಯಾಗಿ ನಡೆಸುತ್ತಿಲ್ಲ ಎಂದು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.