ಕುಷ್ಟಗಿ: ಆಪರೇಷನ್ ಸಿಂದೂರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸೇನೆಯನ್ನು ಗೌರವಿಸಲು ಹಾಗೂ ರಾಷ್ಟ್ರೀಯ ಭದ್ರತೆಗಾಗಿ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ತಿರಂಗಾ ಯಾತ್ರೆ ನಡೆಯಿತು.ಈ ತಿರಂಗಾಯಾತ್ರೆಯಲ್ಲಿ ಸೈನಿಕರ ಪರ ಮತ್ತು ದೇಶದ ಕುರಿತು ಘೋಷಣೆ ಕೂಗುತ್ತಾ ಸಾಗಿದರು. ದಾರಿಯುದ್ದಕ್ಕೂ ಪಾಕಿಸ್ತಾನದ ವಿರೋಧಿ ಘೋಷಣೆಗಳು ಮೊಳಗಿದವು.
ಸೈನಿಕರ ಪರವಾಗಿ ಜಯಕಾರ ಹಾಕಲಾಯಿತು. ತಿರಂಗಾ ಯಾತ್ರೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ಬೆಂಬಲ ಸೂಚಿಸಿದರು.ತಿರಂಗಾ ಯಾತ್ರೆಯು ಪಟ್ಟಣದ ಮಲ್ಲಯ್ಯ ವೃತ್ತದಿಂದ ಪ್ರಾರಂಭವಾಗಿ ಬಸ್ ನಿಲ್ದಾಣ, ಮಾರುತಿ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆಗೊಂಡು ತಾವರಗೇರಾ ರಸ್ತೆಯಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೂ ಅದ್ಧೂರಿಯಾಗಿ ನಡೆಯಿತು.
ತಿರಂಗಾ ಯಾತ್ರೆಗೆ ಚಾಲನೆ ನೀಡಿದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಇತ್ತೀಚಿಗೆ ಕಾಶ್ಮೀರದ ಪಹಲ್ಗಾಮ್‌ದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಅಮಾಯಕರ ಹತ್ಯೆಯಾಗಿದ್ದು ಇದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಆಪರೇಷನ ಸಿಂದೂರ ಕಾರ್ಯಾಚರಣೆ ನಡೆಸಿ ಉಗ್ರಗಾಮಿಗಳ ಹೆಡೆಮುರಿ ಕಟ್ಟಿ ಭ್ರಷ್ಟ ಪಾಕಿಸ್ತಾನದ ಬಲ ಕುಸಿಯುವಂತೆ ಮಾಡಿದೆ ಎಂದು ಹೇಳಿದರು.
ಭಾರತೀಯ ಸೇನೆಯ ಸದೃಢ ನಾಯಕತ್ವ ಮತ್ತು ಸೈನಿಕರ ದಿಟ್ಟ ಉತ್ತರದ ಪರಿಣಾಮದಿಂದ ಪಾಕಿಸ್ತಾನ ಕಂಗೆಟ್ಟಿದೆ. ಭಯೋತ್ಪಾದಕರಿಗೆ ಭಯ ಉಂಟಾಗಿದ್ದು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಿದೆ. ಭಾರತವು ವಿಶ್ವಕ್ಕೆ ಉಗ್ರತ್ವದ ನಿರ್ಮೂಲನೆಯ ಸ್ಪಷ್ಟ ಸಂದೇಶ ನೀಡಿದೆ. ಪ್ರತಿಕೂಲ ಸಮಯದಲ್ಲಿ ದೃಢ ನಿರ್ಧಾರ ಕೈಗೊಂಡು ದೇಶವೇ ಮೊದಲು ಎನ್ನುವ ಸಂದೇಶ ಸಾರಿದೆ ಎಂದರು.ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಉಮೇಶ ಯಾದವ ಮಾತನಾಡಿ, ಪ್ರತೀಕಾರದ ದಾಳಿಯಲ್ಲಿ ಭಾರತ ಉಗ್ರರನ್ನು ಸದೆಬಡಿದಿದೆ. ಭಾರತದ ಮಹಿಳೆಯರು ಶಕ್ತಿಯುತರಾಗಿದ್ದಾರೆ. ಸೇನಾಧಿಕಾರಿಗಳು ಸಮರ್ಥರಿದ್ದಾರೆ.
ದೇಶವನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯವಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದರೆ ಯಾರನ್ನೂ ಉಳಿಸುವುದಿಲ್ಲ. ಪಾಕಿಸ್ತಾನ ನಮಗೆ ಯಾವ ಲೆಕ್ಕವೂ ಅಲ್ಲ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ ಸೇರಿದಂತೆ ನಿವೃತ್ತ ಯೋಧರು ಮಾತನಾಡಿದರು.
ಈ ವೇಳೆ ಪಕ್ಷದ ಪ್ರಮುಖರಾದ ರವಿಕುಮಾರ ಹಿರೇಮಠ, ಮಾಜಿ ಸೈನಿಕರಾದ ಭೀಮಣ್ಣ ಜಾಲಿಹಾಳ, ಮೊಹಮ್ಮದ್ ರಫೀಕ್, ಪ್ರಭು ಶಂಕರಗೌಡ, ದೊಡ್ಡಬಸು, ಪ್ರಕಾಶ, ಚನ್ನಪ್ಪ, ದ್ಯಾಮಣ್ಣ ತಳವಾರ, ಶಿವುಕುಮಾರ ಮೇಲಸಕ್ರಿ, ತಿಪ್ಪಣ್ಣ ಬಿಜಕಲ್ಲ , ಮಾತೋಶ್ರೀ ಹೋಳಿಯಮ್ಮ ಪದವಿ ಕಾಲೇಜ, ಬಿಜಿಎಸ್ ನರ್ಸಿಂಗ್ ಕಾಲೇಜ, ಐಟಿಐ ಕಾಲೇಜ, ಸರ್ಕಾರಿ ಪದವಿ ಕಾಲೇಜ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.