2028ಕ್ಕೆ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ. ಇದೇ ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ, ಇರಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
2028ಕ್ಕೆ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ. ಇದೇ ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ, ಇರಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸತೀಶ ಜಾರಕಿಹೊಳಿ ಹಾಗೂ ನನ್ನ ನೇತೃತ್ವದಲ್ಲಿ 2028ಕ್ಕೆ ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದೆ ತರುತ್ತೇವೆ. ಬೆಳಗಾವಿಯ ಗಾಂಧಿ ಬಾವಿಯಿಂದ ನೀರನ್ನು ತೆಗೆದು ರಸ್ತೆಯನ್ನು ತೊಳೆದು ಭ್ರಷ್ಟ ಬಿಜೆಪಿ ಸರ್ಕಾರವನ್ನು ಅಂದು ತೊಲಗಿಸಲಾಯಿತು. ನಂತರ ಗೃಹಜ್ಯೋತಿ ಮೊದಲ ಗ್ಯಾರಂಟಿ ಯೋಜನೆಯನ್ನು ಈ ಬೆಳಗಾವಿ ನೆಲದಲ್ಲೇ ಘೋಷಣೆ ಮಾಡಲಾಯಿತು. ಅದಕ್ಕೆ ಇದೇ ನೆಲದಲ್ಲಿ ನಿಂತು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ ಎಂದರು.ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ಈ ಹಿಂದೆ ಇದ್ದಂತಹ ಬಿಜೆಪಿ ಸರ್ಕಾರ ಜನಪರವಾದ ಒಂದೇ ಒಂದು ತೀರ್ಮಾನವನ್ನು ಸಹ ಮಾಡಲಿಲ್ಲ. ಅವರು ಭಾವನೆ ಮೇಲೆ ರಾಜಕಾರಣ ಮಾಡಿದರು. ನಾವು ಬದುಕಿನ ಮೇಲೆ ರಾಜಕಾರಣ ಮಾಡಿದೆವು ಎಂದು ತಿಳಿಸಿದರು.ಅನ್ನಭಾಗ್ಯ ಅಕ್ಕಿಯಿಂದ ಮಂತ್ರಾಕ್ಷತೆ:ರಾಮ ನಮ್ಮ ಬಳಿ ಇಲ್ಲವೇ? ಎಲ್ಲ ಧರ್ಮದವರು ನಮ್ಮಲ್ಲಿದ್ದಾರೆ. ನಾವು ಎಲ್ಲ ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇವೆ. ಬಿಜೆಪಿಯವರು ಮನೆ, ಮನೆಗೆ ಮಂತ್ರಾಕ್ಷತೆ ಹಂಚಿದರು. ಈ ಅಕ್ಷತೆ ಅಯೋಧ್ಯೆಯ ರಾಮಮಂದಿರದಿಂದ ಬಂದಿದ್ದು ಎಂದು ಹೇಳಿದರು. ಅದರ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದಾಗ ನಾವು ಕೊಟ್ಟಂತಹ ಅನ್ನ ಭಾಗ್ಯ ಅಕ್ಕಿಗೆ ಅರಿಶಿನ ಕುಂಕುಮ ಹಾಕಿ ಅದನ್ನು ಮಂತ್ರಾಕ್ಷತೆ ಎಂದು ಹಂಚಿದರು ಎಂದು ವ್ಯಂಗ್ಯವಾಡಿದರು.ಇಡೀ ದೇಶದ ಜನರ ಭಾವನೆಗೆ ಧಕ್ಕೆಯಾಗಿದೆ. ನಂಬಿಕೆಗೆ ಸ್ವಾಭಿಮಾನಕ್ಕೆ ದ್ರೋಹ ಎಸೆಗಲಾಗಿದೆ. ನೀವು ಸೇರಿದಂತೆ ಈ ದೇಶದ ಎಷ್ಟೋ ಜನ ರಾಮಮಂದಿರಕ್ಕೆ ಸಣ್ಣ ಕಾಣಿಕೆ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಕಾಣಿಕೆ ಕೊಟ್ಟಿದ್ದಾರೆ. ಆದರೆ, ಅಲ್ಲಿ ಏನಾಗಿದೆ ಎಂಬುವುದನ್ನು ಎಲ್ಲರೂ ತಿಳಿದುಕೊಂಡಿದ್ದೀರಿ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಮಾಧ್ಯಮಗಳಲ್ಲಿ ಅಯೋಧ್ಯೆಯಲ್ಲಿ ಏನಾಗಿದೆ ಎಂಬುವುದನ್ನು ಎಲ್ಲರೂ ನೋಡುತ್ತಿದ್ದಾರೆ ಎಂದರು.ನಾನು ಮುಖ್ಯಮಂತ್ರಿಯಲ್ಲ ಕಾರ್ಯಕರ್ತ:
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿಯವರು ರಾಹುಲ್ ಗಾಂಧಿಯವರು ನನಗೆ ಈ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ನೀಡಿದ್ದಾರೆ. ನಾನು ಮುಖ್ಯಮಂತ್ರಿ ಎನ್ನುವುದಕ್ಕಿಂತ ಪಕ್ಷದ ಕಾರ್ಯಕರ್ತ. ಸಿದ್ದರಾಮಯ್ಯನವರು 8 ವರ್ಷಗಳ ಕಾಲ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಕೊಡುಗೆ ಕೊಟ್ಟಿದ್ದಾರೆ. ಜೊತೆಗೆ ಪಕ್ಷದ ಬಲವರ್ಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು.ನಾನು ಅಧಿಕಾರ ವಹಿಸಿಕೊಂಡ ತಕ್ಷಣ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ರಾಹುಲ್ ಗಾಂಧಿಯವರ ಆಶಯದಂತೆ ಭಾರತ್ ಜೋಡೋ ಯುವಕ ಸಂಘ ಸ್ಥಾಪನೆಗೆ ಮುಂದಾಗಿದ್ದೇವೆ. ಈ ವರ್ಷದಿಂದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಯನ್ನು ಪ್ರಾರಂಭಿಸಲಾಗುವುದು. ನಮ್ಮ ಮಕ್ಕಳೇ ನಾಯಕರಾಗುವುದಲ್ಲ. ನಾನು ವಿದ್ಯಾರ್ಥಿ ನಾಯಕನಾಗಿದ್ದೆ, ಬಿ.ಕೆ.ಹರಿಪ್ರಸಾದ್ ಅವರು ವಿದ್ಯಾರ್ಥಿ ನಾಯಕರಾಗಿದ್ದರು. ಹೀಗೆ ರಾಜ್ಯದ ಪ್ರತಿಯೊಂದು ಊರಿನಲ್ಲೂ ವಿದ್ಯಾರ್ಥಿ ನಾಯಕರು ಬೆಳೆಯಬೇಕು ಎಂದರು.ಐದು ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಸಮರ್ಪಕವಾಗಿ ನೀಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಸಿಎಜಿ ವರದಿ ಪ್ರಕಾರ ಒಂದಷ್ಟು ವ್ಯತ್ಯಾಸಗಳಾಗಿವೆ. ಆದ ಕಾರಣ ಮರುಪರಿಶೀಲನೆ ಮಾಡುತ್ತಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ನಮ್ಮ ರಾಜ್ಯದವರಿಗೆ ನಮ್ಮ ಮತದಾರರಿಗೆ ನಾವು ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ ಎಂದರು.ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದೆ. ಬಿಎಲ್‌ಒ ಗಳು ನೀಡಿರುವ ಅರ್ಜಿಯನ್ನು ಜನರಿಂದ ತುಂಬಿಸಿ ಅದನ್ನು ಪಕ್ಷದ ಬಿಎಲ್‌ಎಗಳು ಪಡೆದು ಬಿಎಲ್‌ಒ ಗಳಿಗೆ ನೀಡಬೇಕು. ನಾನು ಸಹ ಅರ್ಜಿಯನ್ನು ತುಂಬಿ ಸಹಿ ಹಾಕಿ ನೀಡಿದ್ದೇನೆ. ಯಾರೋ ಒಬ್ಬರು ಸಹ ಮತವನ್ನು ಕಳೆದುಕೊಳ್ಳಬೇಡಿ ಎಂದರು.ನಾವು ಬಿಜೆಪಿಯವರಿಗಿಂತ ಒಂದು ಹೆಜ್ಜೆ ಮುಂದಿದ್ದೇವೆ. ಸರ್ಕಾರ ಇದೆಂದು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ ಎಂದು ಅವರು ಆರೋಪ ಮಾಡುತ್ತಿದ್ದಾರೆ. ಅವರು ಏನಾದರೂ ರಾಜಕಾರಣ ಮಾಡಿಕೊಳ್ಳಲಿ. ಪ್ರತಿಯೊಬ್ಬರ ಮತವನ್ನು ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಉಳಿಸಬೇಕು. ಮೊದಲ ಬಾರಿಗೆ ಮತ ಹಾಕುತ್ತಿರುವವರನ್ನು ಗಮನಿಸಿ ಅವರಿಂದಲೂ ಅರ್ಜಿ ಸಲ್ಲಿಸಬೇಕು ಎಂದರು.ಎರಡ್ಮೂರು ತಿಂಗಳಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು:
ಕಾರ್ಯಕರ್ತರು ಅಧಿಕಾರ ಸಿಗಲಿಲ್ಲ ಎಂದು ಬೇಸರ ಪಡಬೇಡಿ. ಪ್ರತಿ ತಾಲೂಕಿನಲ್ಲೂ 15 ಜನರ ಗ್ಯಾರಂಟಿ ಸಮಿತಿಯನ್ನು ರಚಿಸಲಾಯಿತು. ಈಗ 6 ಜನರ ಗ್ಯಾರಂಟಿ ಸಮಿತಿಯನ್ನು ಪ್ರತಿ ಗ್ರಾಮ ಪಂಚಾಯತಿಯಲ್ಲಿ ರಚಿಸಲಾಗುತ್ತಿದೆ. ನಿಮಗೆ ಒಂದು ಹೆಗ್ಗುರುತನ್ನು ನಮ್ಮ ಸರ್ಕಾರ ನೀಡಿದೆ. ನಿಮಗೆ ಗೌರವ ಹಾಗೂ ಹುದ್ದೆಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಈ ಸಮಿತಿಯಲ್ಲಿ ಪ್ರತಿ ಸಮುದಾಯದ ಪ್ರತಿಧರ್ಮದ ಪ್ರತಿನಿಧಿಗಳು ಹಾಗೂ ಒಬ್ಬರು ಮಹಿಳೆ ಕಡ್ಡಾಯವಾಗಿ ಇರಲೇಬೇಕು. ಮುಂದಿನ ಎರಡ್ಮೂರು ತಿಂಗಳಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಬರುತ್ತವೆ. ಈ ಚುನಾವಣೆಗಳಿಗೆ ಎಲ್ಲ ಕಾರ್ಯಕರ್ತರು, ನಾಯಕರು ಸಜ್ಜಾಗಿ ಇರಬೇಕು ಎಂದು ಕರೆ ನೀಡಿದರು.ನಮ್ಮ ಸರ್ಕಾರ ಉಚಿತವಾಗಿ ವಾಸ ದೃಢೀಕರಣ ಪತ್ರ ನೀಡುತ್ತಿದೆ. ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ಸಹ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದೆ. ಸರ್ಕಾರಿ ಸೌಲಭ್ಯಗಳು ನಿಮಗೆ ಸಿಗಬೇಕು ಎಂದರೆ ಯಾರೊಬ್ಬರೂ ಮತವನ್ನು ಕಳೆದುಕೊಳ್ಳಬೇಡಿ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.