ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯುವಕರು, ಕೃಷಿಕರು, ಮಹಿಳೆಯರು, ಬಡವರ ಅಭ್ಯುದಯಕ್ಕೆ ಒತ್ತು ನೀಡಲು ಕಾಂಗ್ರೆಸ್ ಪಕ್ಷದಿಂದ ಭರವಸೆ ನ್ಯಾಯ ಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯವಾಗಿ ಪ್ರಣಾಳಿಕೆಯಲ್ಲಿ ದೇಶದ ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ₹1 ಲಕ್ಷ ನೀಡಲು ಮಹಾಲಕ್ಷಿ ಯೋಜನೆ ಜಾರಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ನಿರುದ್ಯೋಗಿ ಯುವಕರಿಗೆ ಒಂದು ಲಕ್ಷ ರು. ವೆಚ್ಚದೊಂದಿಗೆ ಕೌಶಲ್ಯ ತರಬೇತಿ ನೀಡಿ ಮೊದಲ ಉದ್ಯೋಗ ದೊರಕಿಸಿಕೊಡುವುದು, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಮಾಡುವುದು. ರೈತರಿಗೆ ಸಾಲಮನ್ನಾ ಮತ್ತು ಕೃಷಿ ಬೆಂಬಲ ಬೆಲೆಗೆ ಕಾನೂನಿನ ಬಲ ನೀಡುವುದೂ ಸೇರಿ ಹಲವು ಭರವಸೆ ನೀಡಲಾಗಿದೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷವು ಪಂಚ ನ್ಯಾಯ ‘25 ಗ್ಯಾರಂಟಿ’ಗಳನ್ನು ಘೋಷಿಸಿದೆ. ‘ಮನೆ ಮನೆ ಗ್ಯಾರಂಟಿ’ ಅಭಿಯಾನವು ಆರಂಭವಾಗಿದೆ. ದೇಶದಾದ್ಯಂತ ಸಮಾಲೋಚನೆ ನಡೆಸಿ ಕಾಂಗ್ರೆಸ್, ಪ್ರಣಾಳಿಕೆ ಸಿದ್ಧಪಡಿಸಿದೆ ಎಂದರು.ಶ್ರೀರಾಮ ಯಾರ ಸ್ವತ್ತೂ ಅಲ್ಲ:
ಬಿಜೆಪಿಯವರು ಈಗ ಶ್ರೀರಾಮನ ಬಗ್ಗೆ ಮಾತನಾಡುತ್ತಾರೆ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ, ರಾಮಮಂದಿರಕ್ಕಾಗಿ ಕೇವಲ ಎರಡೂವರೆ ಎಕರೆ ಇತ್ತು. ಅದನ್ನು 65 ಎಕರೆಗೆ ವಿಸ್ತರಣೆ ಮಾಡಿದ್ದರು. ಶ್ರೀರಾಮ ಬಿಜೆಪಿ ಸ್ವತ್ತಲ್ಲ, ರಾಮ ಎಲ್ಲರ ಮನದಲ್ಲಿ ಇದ್ದಾನೆ. ಪಕ್ಷಕ್ಕೆ ಸೀಮಿತವಲ್ಲ, ಭಾವನಾತ್ಮಕ ವಿಷಯಗಳು ಬಹಳ ದಿನ ಉಳಿಯುವುದಿಲ್ಲ ಎಂದರು.ದೇಶದಲ್ಲಿ ರಸ್ತೆ, ಸೇತುವೆ ನಿರ್ಮಾಣ ನಡೆಸುವುದೇ ಅಭಿವೃದ್ಧಿ ಅಲ್ಲ. ಇದೆಲ್ಲದಕ್ಕೂ ಮೀರಿದ್ದು ಜನ ಸಾಮಾನ್ಯರ ಕಲ್ಯಾಣಕ್ಕೆ ಒತ್ತು ನೀಡುವುದು. ಆದರೆ, ಬಿಜೆಪಿಯಿಂದ ಈ ಕಾರ್ಯ ಆಗಿಲ್ಲ. ಅದೇ ರೀತಿ, ದೇಶದಲ್ಲಿ ಸಂವಿಧಾನ ಉಳಿಸಬೇಕಿದ್ದರೆ ಬಿಜೆಪಿ ಬುಡ ಸಮೇತ ಕೀಳಬೇಕಿದೆ ಎಂದರು.ಉದ್ಯಮಿಗಳ ಸಾಲ ಮನ್ನಾ:
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ವಿರೋಧಿಸುವವರು ಬಡವರನ್ನೇ ವಿರೋಧಿಸಿದಂತೆ. ಬಿಜೆಪಿಯವರಿಗೆ ಬಡತನದ ಅರಿವೇ ಇಲ್ಲ, ಅವರೆಲ್ಲ ಶ್ರೀಮಂತರಾಗಿದ್ದಾರೆ. ಅವರಿಗೆ ಆರ್ಥಿಕ ಚಿಂತನೆಯೇ ಗೊತ್ತಿಲ್ಲ, ಗ್ಯಾರಂಟಿ ಕೊಡುವುದರಿಂದ ಸರ್ಕಾರವೇ ದಿವಾಳಿಯಾಗುತ್ತದೆ ಎಂದು ಸಿ.ಟಿ.ರವಿಯಂತವರು ಟೀಕೆ ಮಾಡುತ್ತಾರೆ. ದೇಶದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಉದ್ಯಮಿಗಳ 11 ಲಕ್ಷ ಕೋಟಿ ಹಣ ಮನ್ನಾ ಮಾಡಿದೆ. ಇದರಿಂದ, ದೇಶ ಅವನತಿ ತಲುಪುವುದಿಲ್ಲವೆ ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆಗಳು ತಲುಪಿವೆ. ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಸಭೆ ನಡೆಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು. ಅವರು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಅಂತಹ, ಸಕಾರಾತ್ಮಕ ವಾತಾವರಣ ಇಲ್ಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ಅಧ್ಯಕ್ಷ ಅಹಿಂದ ಜಿಲ್ಲಾ ಘಟಕ ಅಧ್ಯಕ್ಷ ಜಿ.ಡಿ.ಮಂಜುನಾಥ, ಚಂದ್ರಭೂಪಾಲ್, ಆದರ್ಶ ಹುಂಚದಕಟ್ಟೆ ಇದ್ದರು.