ಹೂವಿನಹಡಗಲಿ: ಈ ಬಾರಿಯ ಲೋಕಸಭಾ ಚುನಾವಣೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಹಾಗೂ ಕಾಂಗ್ರೆಸ್ ದುರಾಡಳಿತದ ಮಧ್ಯೆ ಯುದ್ಧ ನಡೆಯಲಿದೆ. ಇದರಲ್ಲಿ ಬಿಜೆಪಿಯೇ 400ಕ್ಕೂ ಹೆಚ್ಚೂ ಸ್ಥಾನಗಳನ್ನು ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲರುವ ಶಾಸಕರಿಗೆ ₹2 ಕೋಟಿ ಅನುದಾನ ನೀಡಬೇಕಿತ್ತು. ಆದರೆ ಕೇವಲ ₹50 ಲಕ್ಷ ಅನುದಾನ ನೀಡಿದ್ದಾರೆ. ಇದರಿಂದ ಯಾವ ಅಭಿವೃದ್ಧಿ ಮಾಡಲು ಸಾಧ್ಯವಿದೆ? ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಡಿಎಂಎಫ್ ಯೋಜನೆಯ ಸುಮಾರು ₹90 ಕೋಟಿ ಅನುದಾನ ತಂದು ಹೂವಿನಹಡಗಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ದೂರಿದರು.
ರಾಜ್ಯದ 28 ಕ್ಷೇತ್ರಗಳಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲವು ಸಾಧಿಸುತ್ತೇವೆ. ದೇಶದ ತುಂಬೆಲ್ಲ ಮೋದಿ ಅಲೆ ಇದೆ. ದೇಶದಲ್ಲಿ ಶಾಶ್ವತ ಯೋಜನೆಗಳನ್ನು ತಂದು ಮೋದಿಯವರು ನವ ಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಲು ಶ್ರಮಿಸುತ್ತಿದ್ದಾರೆ. 2 ಬಾರಿ ಪ್ರಧಾನಿಯಾದರೂ ಭ್ರಷ್ಟಾಚಾರ ಇಲ್ಲದಂತೆ ಸರ್ಕಾರ ನಡೆಸಿರುವ ಮೋದಿ, ಮತ್ತೊಮ್ಮ ಪ್ರಧಾನಿಯಾಗುವ ಮೂಲಕ ಹ್ಯಾಟ್ರಿಕ್ ಪ್ರಧಾನ ಮಂತ್ರಿಗಳಾಗುತ್ತಾರೆ ಎಂದರು.ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿಯವರು ರಾಜ್ಯದ ಪರವಾಗಿದ್ದಾರೆ, ಈ ಹಿಂದಿನ ಬಿಜೆಪಿ ಸರ್ಕಾರ ಅದಕ್ಕೆ ಅಗತ್ಯ ಅನುದಾನ ನೀಡಿತ್ತು. ಆದರೆ ಸಚಿವ ಸಂತೋಷ ಲಾಡ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಹೋರಾಟಗಾರರಿಗೆ ಸುಳ್ಳು ನೆಪಗಳನ್ನು ಹೇಳುತ್ತಾ, ಅವರ ಬೆಂಬಲ ಪಡೆಯುತ್ತಿದ್ದಾರೆ, ಜತೆಗೆ ಈಗಿನ ರಾಜ್ಯ ಸರ್ಕಾರಕ್ಕೆ ಮಹದಾಯಿ ಯೋಜನೆ ಇಚ್ಛಾಸಕ್ತಿ ಇಲ್ಲ, ಇದರ ಮೇಲೆ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಬಳ್ಳಾರಿಯಲ್ಲಿ ಬಿಜೆಪಿ ಲೀಡ್ ತೆಗೆದುಕೊಳ್ಳಲು ಆಗಲ್ಲ, ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ ಎಂದು ಸಚಿವ ನಾಗೇಂದ್ರ ರವರ ಹೇಳಿಕೆಗೆ ಉತ್ತರಿಸಿದ ಶ್ರೀರಾಮುಲು, ಇವರೆಲ್ಲಾ ಮಧ್ಯರಾತ್ರಿ ನಾಯಕರು, ರಾಜಕಾರಣದಲ್ಲಿ ಇಂತಹ ಸಾಕಷ್ಟು ಮಂದಿಯನ್ನು ನೋಡಿದ್ದೇನೆ, ಇದಕ್ಕೆ ಅಖಂಡ ಬಳ್ಳಾರಿ ಜಿಲ್ಲೆಯ ಮತದಾರರು ತಕ್ಕ ಉತ್ತರ ನೀಡುತ್ತಾರೆಂದು ಹೇಳಿದರು.