ಕಾಂಗ್ರೆಸ್ ಗ್ಯಾರಂಟಿ ಲೋಕಸಭಾ ಚುನಾವಣೆಯವರೆಗೆ ಮಾತ್ರ: ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Apr 07, 2024, 01:49 AM IST
ಪೊಟೊ: 6ಎಸ್‌ಎಂಜಿಕೆಪಿ03ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ನಗರ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಬಿಜೆಪಿ ನಗರ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗ್ಯಾರಂಟಿ ಹೆಸರಿನಲ್ಲಿ ನಮ್ಮ ಜೇಬಿನಿಂದ ಹಣ ತೆಗೆದು ನಮಗೆ ನೀಡುವ ಕಾಂಗ್ರೆಸ್ ತಂತ್ರಗಾರಿಕೆ ಮತದಾರರಿಗೆ ತಿಳಿದಿದೆ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿಗಳು ಲೋಕಸಭಾ ಚುನಾವಣೆಯವರೆಗೆ ಮಾತ್ರ ಎಂದು ಸಂಸದ ಬಿ.ವೈ.ರಾಘವೇಂದ್ರ ಭವಿಷ್ಯ ನುಡಿದರು.

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ನಗರ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ನಿಧಾನವಾಗಿ ಅರಿವಿಗೆ ಬರುತ್ತಿದೆ. ಕೇಂದ್ರ ಸರ್ಕಾರ ನೀಡುವ ಮೋದಿ ಅಕ್ಕಿಯನ್ನು ಸಿದ್ದರಾಮಯ್ಯನವರ ಭಾವಚಿತ್ರ ಇರುವ ಚೀಲಕ್ಕೆ ಹಾಕಿ ನಮ್ಮದು ಎಂದು ಕಾಂಗ್ರೆಸ್ ಹೇಳುತ್ತಿದೆ. ಶಕ್ತಿ ಯೋಜನೆ ಎಂದು ಹೇಳಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎನ್ನುತ ಟಿಕೆಟ್ ದರ ಏರಿಸಿ ಶಾಲಾ ಮಕ್ಕಳು ಮತ್ತು ಕೆಲಸಕ್ಕಾಗಿ ಹೋಗುವ ಪುರುಷ ಪ್ರಯಾಣಿಕರಿಗೆ ಬಸ್ಸೇ ದೊರೆಯದ ಹಾಗೆ ಮಾಡಿದ್ದೆ ಕಾಂಗ್ರೆಸ್ ಸಾಧನೆ. ಈಗಾಗಲೇ ಇದರ ಬಗ್ಗೆ ಅನೇಕ ಪ್ರಯಾಣಿಕರು ದೂರು ನೀಡುತ್ತಿದ್ದಾರೆ. ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡದೇ ಈ ರೀತಿಯ ಅವೈಜ್ಞಾನಿಕ ಯೋಜನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಅವೈಜ್ಞಾನಿಕವಾಗಿ ವಾಣಿಜ್ಯ ಮತ್ತು ಇತರ ವಿದ್ಯುತ್ ದರವನ್ನು ಏರಿಸಿ ಉಚಿತ ವಿದ್ಯುತ್ ಎಂದು ಹೇಳುತ್ತಿದ್ದಾರೆ. ದುಡಿದು ಮನೆಗೆ ಬರುವ ಕೂಲಿಕಾರ್ಮಿಕರಿಗೆ ದಿನ ನಿತ್ಯದ ಅಗತ್ಯ ಮದ್ಯದ ದರವನ್ನು ದುಪ್ಪಟ್ಟು ಮಾಡಿ ಅವರ ಮನೆಯ ಮಹಿಳೆಗೆ ಗೃಹಲಕ್ಷ್ಮೀ ಯೋಜನೆಯಲ್ಲಿ 2 ಸಾವಿರ ರು. ನೀಡಿ, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಸ್ಕೀಂನ್ನು ಮಾಡಿದ್ದಾರೆ. ಯುವಕರಿಗೆ ಯುವ ನಿಧಿ ಇನ್ನೂ ಬಂದಿಲ್ಲ, ಕೆಲವರಿಗಷ್ಟೇ ಈ ಸೌಲಭ್ಯ ಸಿಕ್ಕಿದೆ. ಕಾಂಗ್ರೆಸ್ ದೇಶದಲ್ಲಿ ಈಗಾಗಲೇ ನಿರ್ನಾಮವಾಗಿದೆ ಎಂದರು.

ಸಿದ್ದರಾಮಯ್ಯನವರು ಇದೇ ನನ್ನ ಕೊನೆ ಚುನಾವಣೆಯೆಂದು ಪದೇ ಪದೇ ಒತ್ತಿ ಹೇಳುತ್ತ ಡಿ.ಕೆ.ಶಿವಕುಮಾರ್‌ಗೆ ಪರೋಕ್ಷವಾಗಿ ಇನ್ನೂ ಉಳಿದ ಅವಧಿಯಲ್ಲಿ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇಡೀ ರಾಜ್ಯದ ಕಾಂಗ್ರೆಸ್ ಶಾಸಕರು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಕ್ಷೇತ್ರದಲ್ಲಿ ಸರ್ಕಾರದ ಅನುದಾನ ಲಭ್ಯವಾಗದೇ ಬೇಸತ್ತಿದ್ದು, ಈ ಸರ್ಕಾರ ತೊಲಗಲಿ ಎಂದು ಅವರೇ ಹೇಳುತ್ತಿದ್ದಾರೆ ಟೀಕಿಸಿದರು.

ರಾಜ್ಯದ ಮತದಾರರು ಮಳೆ ಬೆಳೆ ಇಲ್ಲದೇ ಸಂಕಷ್ಟ ಪಡುತ್ತಿದ್ದು, ಯಡಿಯೂರಪ್ಪ ಇದ್ದಾಗ ಈ ರಾಜ್ಯ ಸುಭೀಕ್ಷವಾಗಿತ್ತು. ಕೋವಿಡ್ ಬಂದಾಗಲೂ ನಮಗೆ ಈ ಸ್ಥಿತಿ ಬಂದಿರಲಿಲ್ಲ. ಆದಷ್ಟು ಬೇಗ ಬಿಜೆಪಿ ಸರ್ಕಾರ ಬರಲಿ ಎಂದು ಆಶಿಸುತ್ತಿದ್ದಾರೆ. ಲೋಕಸಭಾ ಚುನವಣೆಯಲ್ಲಿ ಬಿಜೆಪಿ ಬೆಂಬಲಿಸುವ ನಿರ್ಧಾರವನ್ನು ಮತದಾರ ಈಗಾಗಲೇ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕುಮಾರಿ ಮಂಜುಳಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯಿತ್ರಿಮಲ್ಲಪ್ಪ, ಪ್ರಮುಖರಾದ ರಶ್ಮಿ ಶ್ರೀನಿವಾಸ್, ಯಶೋಧ, ಸುರೇಖಾ ಮುರಳೀಧರ್, ರೇಣುಕಾ ನಾಗರಾಜ್, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಮೋಹನ್‌ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ