ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾದಾಮಿ ತಾಲೂಕಿನ ಬೇಲೂರಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕೆ ಮಾಡಿದ್ದರು. ಈಗ ಅವರದೇ ಧಾಟಿಯಲ್ಲಿ ಚಿತ್ರನಟಿ ಶ್ರುತಿ ಮಾತನಾಡಿದ್ದಾರೆ. ಒಬ್ಬ ಮಹಿಳೆಯಾಗಿ ಈ ರೀತಿ ಸ್ತ್ರೀ ಸಮೂಹ ಅಪಮಾನ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಪಿಯುಸಿ ಟಾಪರ್‌ಗಳು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ನಮ್ಮ ಸಾಧನೆಗೆ ಕಾರಣವಾಗಿವೆ ಎಂದು ಹೇಳುತ್ತಿದ್ದಾರೆ. ಲಕ್ಷ ಲಕ್ಷ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಕೀಳುಮಟ್ಟದ ಟೀಕೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.ಬೆಲೆ ಏರಿಕೆಯಿಂದ ಬಡ ಕುಟುಂಬಗಳಿಗೆ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳು ಈ ಕುಟುಂಬಗಳಿಗೆ ಆಸರೆಯಾಗಿವೆ. ಟೀಕೆ ಮಾಡುವವರಿಗೆ ಬಡ ಕುಟುಂಬಗಳ ಕಷ್ಟದ ಅರಿವು ಹೇಗಾಗಬೇಕು ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ಸತತ ಎರಡು ಬರಗಾಲಕ್ಕೆ ತುತ್ತಾದಾಗ ನೆರವು ಕೇಳಿದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೆಪ ಹೇಳಿದರು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದುಕೊಳ್ಳಬೇಕಾಯಿತು. ಕೋರ್ಟ್ ಹೇಳಿದ ನಂತರ ಹಣ ಬಿಡುಗಡೆಯ ಮಾತು ಹೇಳಿದ್ದಾರೆ ಎಂದು ಸಂಯುಕ್ತಾ ಪಾಟೀಲ ತರಾಟೆಗೆ ತೆಗೆದುಕೊಂಡರು.
ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಬರೆಯುವ ಕನಸು ನನ್ನದು. ರೈಲ್ವೆ ಯೋಜನೆ, ಕಳಸಾ-ಬಂಡೂರಿ ಯೋಜನೆ, ಯುಕೆಪಿ, ಜವಳಿ ಪಾರ್ಕ್ ಸ್ಥಾಪನೆಯ ಆಶಯ ನನ್ನದು. ಒಂದುಬಾರಿ ಅವಕಾಶ ಕೊಡಿ, ನಿಮ್ಮ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಎಂ.ಆರ್. ಪಾಟೀಲ, ಎಂ.ಡಿ. ಯಲಿಗಾರ್, ಶಶಿಧರ್, ಎ.ಎಂ. ತಹಸೀಲ್ದಾರ್, ಬಸವರಾಜ ಡೊಳ್ಳಿನ, ಸಾವಕ್ಕ ಅಳಗುಂಡಿ, ಅನುರಾಧಾ ದೊಡ್ಡಮನಿ, ಮತ್ತಿತರರು ಉಪಸ್ಥಿತರಿದ್ದರು.