ದ.ಕ.ದಲ್ಲಿ 72 ಮಾದರಿ ಮತಗಟ್ಟೆ ರಚನೆ, ಒಂದೊಂದು ಮತಗಟ್ಟೆಯೂ ಭಿನ್ನ, ವಿಭಿನ್ನ!

KannadaprabhaNewsNetwork |  
Published : Apr 26, 2024, 12:52 AM IST
ಮೂಲ್ಕಿ ತಾಲೂಕಿನ ನಾಲ್ಕು ಮತಗಟ್ಟೆಗಳಲ್ಲಿ ವಿಶೇಷ ಆಕರ್ಷಣೆ  | Kannada Prabha

ಸಾರಾಂಶ

ಮೂಲ್ಕಿ ತಾಲೂಕಿನಲ್ಲಿ‌ ಒಟ್ಟು 4 ಮತಗಟ್ಟೆಗಳು ಮಾದರಿ ಮತಗಟ್ಟೆಯಾಗಿ ಆಯ್ಕೆಯಾಗಿದ್ದು, ಎಲ್ಲರ ಗಮನ ಸೆಳೆಯುವಂತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು/ ಮೂಲ್ಕಿ

ಸಾರ್ವತ್ರಿಕ ಲೋಕಸಭಾ ಚುನಾವಣಾ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು ದ.ಕ. ಜಿಲ್ಲೆಯಲ್ಲಿ ಏ.26ರಂದು ಮತದಾನ ನಡೆಯಲಿದೆ. ಈ ಬಾರಿ ಚುನಾವಣೆಗೆ 72 ಮಾದರಿ ಮತಗಟ್ಟೆಗಳನ್ನು ಮಾಡಲಾಗಿದೆ. ಇದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಸಖಿ ಬೂತ್‌ಗಳಂತೆ ಒಟ್ಟು 40 ಸಖಿ ಬೂತ್‌ಗಳು, 8 ಪಿಡಬ್ಲ್ಯೂಡಿ, 8 ಯುವ ಬೂತ್‌, 8 ಧ್ಯೇಯ ಬೂತ್‌ ಹಾಗೂ 8 ಸಾಂಪ್ರದಾಯಿಕ ಬೂತ್‌ಗಳನ್ನು ರಚಿಸಲಾಗಿದೆ.

ಮೂಲ್ಕಿ ತಾಲೂಕಿನಲ್ಲಿ‌ ಒಟ್ಟು 4 ಮತಗಟ್ಟೆಗಳು ಮಾದರಿ ಮತಗಟ್ಟೆಯಾಗಿ ಆಯ್ಕೆಯಾಗಿದ್ದು, ಎಲ್ಲರ ಗಮನ ಸೆಳೆಯುವಂತಿದೆ.

ಮತಗಟ್ಟೆ ಸಂಖ್ಯೆ 94 ಕಿನ್ನಿಗೋಳಿ ಸಮೀಪದ ಐಕಳದ ಪೊಂಪೈ ಕಾಲೇಜು ವಿಶೇಷಚೇತನರ ವಿಷಯವಾಗಿ ಮತಗಟ್ಟೆಯಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಪಡುಪಣಂಬೂರು ಗ್ರಾಮ ಪಂಚಾಯಿತಿ ಕಟ್ಟಡದ ಕೊಠಡಿ ಸಂಖ್ಯೆ 123ರಲ್ಲಿ ಯುವ ಜನರನ್ನು ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹಿಸುವಂತೆ ಚಿತ್ರಗಳನ್ನು ಬಿಡಿಸಿ, ಸೆಲ್ಫಿ ಸ್ಟ್ಯಾಂಡ್‌ಗಳನ್ನು ರಚಿಸಲಾಗಿದೆ. ಮತಗಟ್ಟೆ ಸಂಖ್ಯೆ 118 ದ.ಕ.ಜಿ.ಪಂ. ಉನ್ನತೀಕರಿಸಿದ ಮಾದರಿ ಪ್ರಾಥಮಿಕ ಶಾಲೆ ಕೆ. ಎಸ್ . ರಾವ್ ನಗರ ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಸಖಿ ಮತಗಟ್ಟೆಗೆ ಆಯ್ಕೆಯಾಗಿದೆ. ಇನ್ನು ತಾಲೂಕಿನಲ್ಲೇ ವಿಶೇಷವಾಗಿ ಮೂಡಿ ಬಂದಿರುವ ಮತಗಟ್ಟೆ ಎಂದರೆ ಅದು ಕೆಮ್ರಾಲ್ ಗ್ರಾಮ ಪಂಚಾಯಿತಿ ಕಟ್ಟಡದ ಕೊಠಡಿ ಸಂಖ್ಯೆ 130. ಈ ಮತಗಟ್ಟೆಗೆ ಸಾಂಪ್ರಾದಾಯಿಕ ಮತಗಟ್ಟೆ ಎಂಬ ವಿಷಯವನ್ನು‌ ನೀಡಲಾಗಿದೆ.

ಹಳೆ ಕಾಲದಲ್ಲಿ ಬಳಸುತ್ತಿದ್ದ‌ ಮಣ್ಣಿನ ಪಾತ್ರೆಗಳು, ಲ್ಯಾಂಪ್‌ಗಳು, ಹುಲ್ಲಿನ ಛಾವಣಿ, ಮಾವಿನ ಎಲೆಯಿಂದ ತೋರಣವನ್ನು ಕಟ್ಟಲಾಗಿದ್ದು, ಒಂದು ಹಳ್ಳಿಯ ಸೊಗಡನ್ನು ಬಿಂಬಿಸುವಂತೆ ಮತಗಟ್ಟೆಯನ್ನು ಅಲಂಕರಿಸಲಾಗಿದೆ. ಹೀಗೆ ಒಂದಕ್ಕಿಂತ ಒಂದು ವಿಭಿನ್ನವಾಗಿ ಅಲಂಕಾರಗೊಂಡಿದ್ದು, ಗ್ರಾಮದ ಜನರ ಗಮನ ಸೆಳೆಯುತ್ತಿದೆ.

ಮತ ಚಲಾಯಿಸಿ ಸೆಲ್ಫೀ ತಗೊಳ್ಳಿ...

ಪಡುಪಣಂಬೂರು ಗ್ರಾಮ ಪಂಚಾಯಿತಿ ಕಟ್ಟಡ ಕೊಠಡಿ ಸಂಖ್ಯೆ 123ರಲ್ಲಿ ಯುವ ಜನರನ್ನು ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹಿಸುವಂತೆ ಚಿತ್ರಗಳನ್ನು ಬಿಡಿಸಿ, ಸೆಲ್ಫಿ ಸ್ಟ್ಯಾಂಡ್‌ಗಳನ್ನು ಅಳವಡಿಸಲಾಗಿದೆ. ಯುವ ಮತದಾರರು, ಮೊದಲ ಬಾರಿಗೆ ವೋಟ್ ಮಾಡುವವರಿಗೆ ಇಲ್ಲಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇತರರಿಗೂ ವೋಟ್ ಮಾಡುವಂತೆ ಪ್ರೇರೇಪಿಸುತ್ತಾರೆ.

ದೇರಳಕಟ್ಟೆಯಲ್ಲಿ ಹಸಿರಿಗೆ ಒತ್ತು ನೀಡುವ ಗೋಗ್ರೀನ್‌ ಮತಗಟ್ಟೆ ರಚಿಸಲಾಗಿದೆ. ಬಾಳೆಪುಣಿ ಗ್ರಾಮ ಪಂಚಾಯ್ತಿಯಲ್ಲಿ ಸಖಿ ಮತಗಟ್ಟೆ ರೂಪಿಸಲಾಗಿದೆ. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಯುವ ಮತಗಟ್ಟೆ ರಚಿಸಲಾಗಿದ್ದು, ಸೆಲ್ಫಿ ಪಾಯಿಂಟ್‌ ಕೂಡ ತೆರೆಯಲಾಗಿದೆ. ಪಡುಪಣಂಬೂರಿನಲ್ಲಿ ಕೂಡ ಯುವ ಸೆಲ್ಫಿ ಮತಗಟ್ಟೆ, ಉಳಾಯಿಬೆಟ್ಟಿನಲ್ಲಿ ಯಕ್ಷಗಾನ ಚಿತ್ರದ ಮತಗಟ್ಟೆ ರೂಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!