ಕಾಂಗ್ರೆಸ್ ಗ್ಯಾರಂಟಿ ದಿಲ್ಲಿಯಲ್ಲಿ ಬಿಜೆಪಿ ಕಾಪಿ: ಸಿಆರ್‌ಎಸ್

KannadaprabhaNewsNetwork | Published : Feb 26, 2025 1:00 AM

ಸಾರಾಂಶ

ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿಯಾಗಲಿದೆ ಎಂದು ಹೇಳಿದ್ದ ಪ್ರಧಾನಿ ಮೋದಿ ಅವರೇ ದೆಹಲಿ ಚುನಾವಣೆ ಗೆಲುವಿಗಾಗಿ ಮಹಿಳೆಯರಿಗೆ ೨೫೦೦ ರು. ನೀಡುವ ಘೋಷಣೆ ಮಾಡಿದರು. ಈಗ ದೆಹಲಿ ದಿವಾಳಿಯಾಗುವುದಿಲ್ಲವೇ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿಯಾಗಲಿದೆ ಎಂದು ಹೇಳಿದ್ದ ಪ್ರಧಾನಿ ಮೋದಿ ಅವರೇ ದೆಹಲಿ ಚುನಾವಣೆ ಗೆಲುವಿಗಾಗಿ ಮಹಿಳೆಯರಿಗೆ ೨೫೦೦ ರು. ನೀಡುವ ಘೋಷಣೆ ಮಾಡಿದರು. ಈಗ ದೆಹಲಿ ದಿವಾಳಿಯಾಗುವುದಿಲ್ಲವೇ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

ತಾಲೂಕಿನ ತಿಟ್ಟನಹೊಸಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ೨.೬ ಕೋಟಿ ರು. ವೆಚ್ಚದ ಸೇತುವೆ ಮತ್ತು ತಡೆಗೋಡೆ ನಿರ್ಮಾಣ ಹಾಗೂ ಕಾಮಡಿಹಳ್ಳಿ ಗ್ರಾಮದಲ್ಲಿ ಹೇಮಾವತಿ ಇಲಾಖೆಯ ೪.೫ ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪ್ರತಿ ರೈತ ಕುಟುಂಬಕ್ಕೂ ಉಚಿತ ವಿದ್ಯುತ್, ೧೦ ಕೆಜಿ ಅಕ್ಕಿ, ಗೃಹಲಕ್ಷ್ಮೀ ಯೋಜನೆಯಲ್ಲಿ ೨ ಸಾವಿರ ರು. ಹಣ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರ ದೇಶಕ್ಕೆ ಮಾದರಿಯಾಗಿದೆ. ಈ ೫ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಬಾರಿಯೂ ಸಹ ಉತ್ತಮ ಬಜೆಟ್ ನೀಡಲಿದೆ ಎಂದು ವಿಶ್ವಾಸದಿಂದ ಹೇಳಿದರು.

ತಿಟ್ಟನಹೊಸಹಳ್ಳಿ ಗ್ರಾಮದಲ್ಲಿ ಸೇತುವೆ ನಿರ್ಮಾಣದಿಂದ ಕೋಡಿಹಳ್ಳಿ, ಕಾಮಡಿಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳ ಜನರಿಗೆ ಬಹಳಷ್ಟು ಅನುಕೂಲವಾಗುವ ಜೊತೆಗೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ರಸ್ತೆಯೂ ಆಗುತ್ತದೆ. ತಡೆಗೋಡೆ ನಿರ್ಮಿಸುವುದರಿಂದ ಈ ಭಾಗದ ರೈತರ ತೆಂಗಿನ ತೋಟಗಳು ಸುರಕ್ಷಿತವಾಗುತ್ತವೆ. ಜೊತೆಗೆ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲವೂ ಹೆಚ್ಚಾಗಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಒಟ್ಟಾರೆ ಗೊಂಡೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ೧೨ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ಯಾವುದೇ ಕಾಮಗಾರಿಯಾಗಲಿ, ದೀರ್ಘಕಾಲ ಬಾಳಿಕೆ ಬರುವಂತೆ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬಹಳ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು. ಕಳಪೆ ಗುಣಮಟ್ಟ ಕಂಡುಬಂದಲ್ಲಿ ಸಹಿಸುವುದಿಲ್ಲ ಎಂದ ಸಚಿವರು, ಮುಂದಿನ ಎರಡು ವರ್ಷದಲ್ಲಿ ತಾಲೂಕಿನ ಹಲವೆಡೆ ಶಿಥಿಲಗೊಂಡಿರುವ ಬಹುತೇಕ ರಸ್ತೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ನವೀನ್‌ಕುಮಾರ್, ಮುಖಂಡರಾದ ಎನ್.ಟಿ.ಕೃಷ್ಣಮೂರ್ತಿ, ಗೌರೀಶ್, ವಜ್ರೇಗೌಡ, ಶಶಿಕುಮಾರ್, ಬೆಳ್ಳೂರು ಶಿವಣ್ಣ, ತಾಪಂ ಮಾಜಿ ಸದಸ್ಯ ವೆಂಕಟೇಶ್ ಬೆಳ್ಳೂರು ಪಪಂ ಉಪಾಧ್ಯಕ್ಷ ಮಹಮ್ಮದ್ ಯಾಸೀನ್, ಸಣ್ಣ ನೀರಾವರಿ ಇಲಾಖೆಯ ಎಇಇ ನಿರ್ಮಲೇಶ್ ಮತ್ತಿತರರಿದ್ದರು.

Share this article