ತಾವು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ದಂಪತಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾವು ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ದಂಪತಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕತ್ರಿಗುಪ್ಪೆ ನಿವಾಸಿಗಳಾದ ಎಂ.ಐಶ್ವರ್ಯ ಹಾಗೂ ಮಣಿಕಂಠ ಬಂಧಿತರಾಗಿದ್ದು, ಆರೋಪಿಗಳಿಂದ 199 ಗ್ರಾಂ ಚಿನ್ನಾಭರಣ, 730 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 13.20 ಲಕ್ಷ ಹಣ ಸೇರಿದಂತೆ 42.89 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಉದ್ಯಮಿ ಜಿ.ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಕೃತ್ಯದಲ್ಲಿ ತಮ್ಮ ಮನೆ ಕೆಲಸಗಾರರ ಕೈವಾಡ ಬಗ್ಗೆ ಅವರು ಶಂಕೆ ವ್ಯಕ್ತಪಡಿಸಿದ್ದರು. ಈ ಮಾಹಿತಿ ಮೇರೆಗೆ ತನಿಖೆಗಿಳಿದ ಪೊಲೀಸರು, ಅನುಮಾನದ ಮೇರೆಗೆ ಮಣಿಕಂಠ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊನೆಗೆ ತಪ್ಪೊಪ್ಪಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವಪಟ್ಟಣದ ದಾಗಿನಕಟ್ಟೆ ಗ್ರಾಮದ ಮಣಿಕಂಠ ಹಾಗೂ ಐಶ್ವರ್ಯ ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದರು. 6 ತಿಂಗಳ ಹಿಂದೆ ಉದ್ಯಮಿ ಮಲ್ಲಿಕಾರ್ಜುನ್‌ ಮನೆಯಲ್ಲಿ ಅವರ ಕಾರು ಚಾಲಕನಾಗಿ ಮಣಿಕಂಠ ಹಾಗೂ ಮನೆಯಲ್ಲಿ ಸಹಾಯಕಿಯಾಗಿ ಐಶ್ವರ್ಯ ಸೇರಿದ್ದರು. ಆ ಮನೆಯ ಔಟ್‌ಹೌಸ್‌ನಲ್ಲಿ ದಂಪತಿ ನೆಲೆಸಿದ್ದರು. ಆದರೆ, ಹಣದಾಸೆಗೆ ಬಿದ್ದು ಮಾಲಿಕರ ವಿಶ್ವಾಸಕ್ಕೆ ದಂಪತಿ ದ್ರೋಹ ಬಗೆದರು. ಮಾಲಿಕರ ಕುಟುಂಬಕ್ಕೆ ಗೊತ್ತಾಗದಂತೆ ಮನೆಯಲ್ಲಿ ಒಂದೊಂದಾಗಿ ಚಿನ್ನಾಭರಣವನ್ನು ಆರೋಪಿಗಳು ಕಳವು ಮಾಡಿದ್ದರು. ಇತ್ತೀಚಿಗೆ ಮನೆಯಲ್ಲಿ ಚಿನ್ನಾಭರಣ ಕಾಣದೆ ಹೋದಾಗ ಕೆಲಸಗಾರರ ಮೇಲೆ ಮಲ್ಲಿಕಾರ್ಜುನ್ ಅವರಿಗೆ ಶಂಕೆ ಮೂಡಿದೆ. ಕೂಡಲೇ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಅವರು ದೂರು ನೀಡಿದ್ದರು. ಅದರನ್ವಯ ತನಿಖೆ ನಡೆಸಿದಾಗ ಮಣಿಕಂಠ ದಂಪತಿ ಕಳ್ಳತನ ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.