ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ಗುರುವಾರ ಜಿಲ್ಲಾಧಿಕಾರಿ ಡಾ.ಆನಂದ.ಕೆ ದಿಢೀರ್ ಭೇಟಿ ನೀಡಿ, ಕಚೇರಿಯ ದೈನಂದಿನ ಆಡಳಿತ ಕಾರ್ಯವೈಖರಿ ಹಾಗೂ ಹಾಲಿ ವ್ಯವಸ್ಥೆಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದರು.ಕಚೇರಿ ಭೇಟಿಯ ವೇಳೆ ಕಚೇರಿಯ ವಾತಾವರಣವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಇಡೀ ಕಚೇರಿಯ ಆವರಣದಲ್ಲಿ ಸಂಪೂರ್ಣ ಶುಚಿತ್ವ, ಶಿಸ್ತು ಹಾಗೂ ಚೊಕ್ಕಟವಾಗಿರುವಂತೆ ನೋಡಿಕೊಳ್ಳಬೇಕು ಎಂದು ಕಚೇರಿಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಚುರುಕು ಮುಟ್ಟಿಸಿದರು. ಅಲ್ಲದೇ, ಈ ಮೂಲಕ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಚೇರಿಗೆ ಆಗಮಿಸುವ ಸಾರ್ವಜನಿಕರ ಹಿತಾಸಕ್ತಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಮೂಲ ಸೌಲಭ್ಯಕ್ಕೆ ಸೂಚನೆ: ಕಚೇರಿಗೆ ಆಗಮಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ಸೌಲಭ್ಯಗಳನ್ನು ಸಮರ್ಪಕವಾಗಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಜೊತೆಗೆ, ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರ ಅರ್ಜಿಗಳಿಗೆ ಕಾಲಮಿತಿ ಹಾಕಿಕೊಂಡು ಕೆಲಸ ಮಾಡಿಕೊಡಬೇಕು. ಇದರೊಂದಿಗೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತಕ್ಷಣವೇ ಸ್ಪಂದಿಸಿ ತ್ವರಿತ ಸೇವೆಯನ್ನು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಈ ವೇಳೆ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರಿಂದ ಅವರ ಕೆಲಸ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ಕ್ರಮಕ್ಕೆ ಸೂಚನೆ ನೀಡಿದರು.
ಈ ದಿಢೀರ್ ಭೇಟಿ ಸಂದರ್ಭದಲ್ಲಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಕಚೇರಿಯ ಪ್ರಸ್ತುತ ಸ್ಥಿತಿಗತಿ ಹಾಗೂ ಕಾರ್ಯನಿರ್ವಹಣೆಯ ಕುರಿತು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.