ಡಾ.ಸಿ.ಎಂ.ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪ್ರತಿವರ್ಷ ಆ.15 ಬಂತೆಂದರೆ, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಪಟ್ಟಣದ ಸ್ವಾತಂತ್ರ್ಯ ಯೋಧ ಸಾಬಣ್ಣ ಶಿಂಧೆ ಅವರ ಮನೆ ಮುಂದೆ ಸಂಭ್ರಮದಿಂದ ಧ್ವಜಾರೋಹಣ ನಡೆಯುತ್ತದೆ. ಅಂದು ಸರಿಯಾಗಿ ಬೆಳಗಿನ ಜಾವ 7 ಗಂಟೆಗೆ ಗಣ್ಯರು ಧ್ವಜಾರೋಹಣ ಮಾಡುತ್ತಾರೆ. ಓಣಿಯ ಹಿರಿ-ಕಿರಿಯರೆಲ್ಲ ಪಾಲ್ಗೊಳ್ಳುತ್ತಾರೆ. ಅವರ ಮನೆ ಮುಂದೆ ನಡೆಯುತ್ತಿವುದು 80ನೇ ಸಂಭ್ರಮದ ಧ್ವಜಾರೋಹಣ. ಸಾಬಣ್ಣ ಅವರು ಇಂದು ಜೀವಂತವಿಲ್ಲ. ಆದರೆ, ಸ್ವಾತಂತ್ರ್ಯ ಸಿಕ್ಕ ದಿನದಿಂದ ತಮ್ಮ ಮನೆಯ ಮುಂದೆ ಅಂಗಳದಲ್ಲಿ ಆಚರಿಸಿಕೊಂಡು ಬಂದ ಧ್ವಜಾರೋಹಣ ಕಾರ್ಯಕ್ರಮ ಇನ್ನೂ ನಿರಂತರವಾಗಿದೆ. ಅವರ ಕುಟುಂಬದವರು ಮುಂದುವರಿಸಿಕೊಂಡು ಬಂದಿದ್ದಾರೆ. ಸಾಬಣ್ಣ ಸಿಂಧೆ ತಮ್ಮ ಬದುಕನ್ನೇ ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದವರು. ಅವರು ಅಗಲಿ 40 ವರ್ಷಗಳೇ ಸಂದಿವೆ. ಅವರು ಜೀವಂತ ಇರುವ ತನಕ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿವರ್ಷ ತಪ್ಪದೇ ಸ್ವತಃ ಅವರೇ ಮುಂದೆ ನಿಂತು ಆಚರಿಸಿಕೊಂಡು ಬಂದರು. 1986ರಲ್ಲಿ ಅವರು ಮರಣಹೊಂದಿದ ಬಳಿಕವೂ ಅವರ ಮನೆಯ ಮುಂದೆ ಇನ್ನೂ ಧ್ವಜಾರೋಹಣದ ಸಂಭ್ರಮ ನಿಂತಿಲ್ಲ. ನಂತರ ಅವರ ಮಕ್ಕಳು, ಈಗ ಅವರ ಮೊಮ್ಮಕ್ಕಳು ಆಚರಿಸಿಕೊಂಡು ಬರುತ್ತಿದ್ದಾರೆ.

1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸಾಬಣ್ಣ ಪಾಲ್ಗೊಂಡಿದ್ದರು. ಬ್ರಿಟಿಷರ ಕಣ್ಣು ತಪ್ಪಿಸಿ ಕೆಲವು ಸಲ ಮಹಿಳೆಯರ ವೇಷಧರಿಸಿ ತಿರುಗಾಡುತ್ತ ಬ್ರಿಟಿಷರ ವಿರುದ್ಧದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೂ ಉಂಟು. ಟೆಲಿಫೋನ್ ತಂತಿ ಕಟ್ ಮಾಡಿದ್ದು, ರೈಲು ಹಳಿ ಕಿತ್ತಿದ್ದು, ಅಂಚೆ ಪೆಟ್ಟಿಗೆ ನಾಶ ಮಾಡಿದ ಪ್ರಸಂಗಗಳು ಬ್ರಿಟಿಷ್ರ ವಿರುದ್ಧ ಮಾಡಿದ ಇಂತಹ ಅನೇಕ ಕಾರ್ಯಾಚರಣೆಗಳು ಬ್ರಿಟಿಷರನ್ನು ನಿದ್ದೆಗೆಡಿಸುವಂತೆ ಮಾಡಿದ್ದವು.

ಸ್ವಾತಂತ್ರ್ಯಾ ನಂತರ ಸಾಬಣ್ಣ ಅವರಿಗೆ ಸರ್ಕಾರ ನೀಡುತ್ತಿದ್ದ ಮಾಸಾಶನವನ್ನು ಅವರು ಸರ್ಕಾರಕ್ಕೆ ಮರಳಿಸಿದ್ದು, ಅವರ ದೇಶ ಪ್ರೇಮದ ಪ್ರತೀಕವಾಗಿದೆ. 1986ರಲ್ಲಿ ಮರಣ ಹೊಂದಿದರು. ಸ್ವಾತಂತ್ರ್ಯ ಹೋರಾಟಗಾರ ಸಾಬಣ್ಣ ಶಿಂಧೆ ನಮ್ಮಿಂದ ಭೌತಿಕವಾಗಿ ದೂರಾದರೂ ಅವರ ಸ್ವಾತಂತ್ರ್ಯ ಸಂಭ್ರಮದ ದಿನಾಚರಣೆ ಮಾತ್ರ ಇಂದಿಗೂ ಮುಂದುವರೆದಿದೆ.ಬಾಕ್ಸ್....


ಇಂದು ನಡೆಯಲಿದೆ ಧ್ವಜಾರೋಹಣ

ಬಾಗಲಕೋಟೆಯ ಡೆಪ್ಯೂಟಿ ಇಲೆಕ್ಟ್ರಿಕಲ್ ಇನ್ಸಪೆಕ್ಟರ್ ದೊಡ್ಡನಿಂಗಪ್ಪ ಹರಲು ಅವರು ಈ ವರ್ಷ ಸಾಬಣ್ಣ ಅವರ ಮನೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸ್ಥಳೀಯ ಕೃಷಿ ಅಧಿಕಾರಿ ಆನಂದಗೌಡ ಗೌಡರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಬಣ್ಣ ಶಿಂಧೆ ಅವರ ಮೊಮ್ಮಕ್ಕಳು, ಓಣಿಯ ಹಿರಿಯರು ಹಾಗೂ ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗಿನ ಜಾವ 7 ಗಂಟೆಗೆ ಸರಿಯಾದ ಸಮಯಕ್ಕೆ ಧ್ವಜಾರೋಹಣ ನೆರವೇರಲಿದೆ. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದು ತಾಲೂಕಿಗೆ ಪ್ರಥಮ ಬಂದ ವಿದ್ಯಾರ್ಥಿಗಳಿಗೆ, ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಗೌರವ ಸನ್ಮಾನ ನಡೆಯಲಿದೆ.

----

ಕೋಟ್‌...

ಮುಂದಿನ ವರ್ಷದಿಂದ ತಾಲೂಕಿನ ತೋಗುಣಸಿ ಗ್ರಾಮದ ಹತ್ತಿರ ಬಾದಾಮಿ ರಸ್ತೆಗೆ ಅಜ್ಜನ ಹೆಸರು ಚಿರಸ್ಥಾಯಿಯಾಗಿ ಉಳಿಸಲು ಅವರ ಹೆಸರಿನ ಮೇಲೆ ಅನಾಥಾಶ್ರಮ, ಅಜ್ಜಿಯ ಹೆಸರಿನ ಮೇಲೆ ವೃದ್ಧಾಶ್ರಮ ಹಾಗೂ ತಂದೆಯ ಹೆಸರಿನ ಮೇಲೆ ಉಚಿತ ಶಾಲೆ ಪ್ರಾರಂಭಿಸಲಾಗುತ್ತಿದೆ.

-ಗೋಪಾಲ ಪಾಂಡುರಂಗ ಶಿಂಧೆ (ಮೊಮ್ಮಗ) ಅಭಿಯಂತರರು, ರಾಹೂರ, ಮಹಾರಾಷ್ಟ್ರ