ಬಿಜೆಪಿಯಿಂದ ಕಾಂಗ್ರೆಸ್ ಗ್ಯಾರಂಟಿಗಳು ನಕಲು: ಎಚ್.ಎಂ.ರೇವಣ್ಣ

KannadaprabhaNewsNetwork |  
Published : Sep 28, 2025, 02:00 AM IST
27ಕೆಆರ್ ಎಂಎನ್ 2.ಜೆಪಿಜಿರಾಮನಗರ ಜಿಪಂ ಆವರಣದಲ್ಲಿ  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಕ್ತಿ ಯೋಜನೆಯ ಲಾಂಛನ ನೀಡಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಸ್ವಾಗತಿಸಿದರು. | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆಗಳು ಜಾರಿಯಾದ ಸಂದರ್ಭದಲ್ಲಿ ನಾನು ಬಿಜೆಪಿಯಲ್ಲಿದ್ದೆ. ಆಗ ಈ ಯೋಜನೆಗಳ ಹೆಸರಿನಲ್ಲಿ ಹಣ ಸೋರಿಕೆಯಾಗುತ್ತದೆ. ಬಿಟ್ಟಿ ಭಾಗ್ಯಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಚರ್ಚೆ ನಡೆಸಿದ್ದೇವು. ಆದರೀಗ ಅದೆಲ್ಲವೂ ಸುಳ್ಳಾಗಿದೆ .

ಕನ್ನಡಪ್ರಭ ವಾರ್ತೆ ರಾಮನಗರ

ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬಿದ್ದು, ರಾಜ್ಯದ ತಲಾ ಆದಾಯ 2 ಲಕ್ಷಕ್ಕೆ ಮುಟ್ಟಿದೆ. ಬಿಟ್ಟಿ ಭಾಗ್ಯಗಳೆಂದು ಲೇವಡಿ ಮಾಡುತ್ತಿದ್ದ ಬಿಜೆಪಿಯವರು ತಾವು ಆಡಳಿತವಿರುವ ರಾಜ್ಯಗಳಲ್ಲಿಯೇ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಟೀಕಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅತ್ಯುತ್ತಮ ಆಡಳಿತ, ಉತ್ತಮ ಬಜೆಟ್ ನೀಡುವ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ ಎಂದರು.

ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿಯವರು 2019ರಲ್ಲಿ ನ್ಯಾಯ್ - ಸಾರ್ವತ್ರಿಕ ಕನಿಷ್ಠ ಆದಾಯದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದರ ಬಗ್ಗೆ ಗಂಭೀರ ಚರ್ಚೆಗಳು ನಡೆದಿರಲಿಲ್ಲ. ಆ ಕಲ್ಪನೆಗಳ ಆಧಾರದ ಮೇಲೆಯೇ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಇದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಿಶ್ರಮ ಸಾಕಷ್ಟಿದೆ ಎಂದು ಹೇಳಿದರು.

ಕಾಂಗ್ರೆಸ್ ನ ಪ್ರತಿಯೊಬ್ಬ ಮುಖ್ಯಮಂತ್ರಿಯೂ ರಾಜ್ಯಕ್ಕೆ ಒಂದೊಂದು ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳ ಲಾಭವನ್ನು ಪ್ರತಿಯೊಂದು ಮನೆಯವರು ಪಡೆದಿದ್ದಾರೆ. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು ತಂಡಗಳಾಗಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ರೇವಣ್ಣ ತಿಳಿಸಿದರು.

ಭಾರತದ ಇತಿಹಾಸದಲ್ಲಿ ಗ್ಯಾರಂಟಿ ಯೋಜನೆ ದಾಖಲೆ:

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಕರ್ನಾಟಕದಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳು ಭಾರತದ ಇತಿಹಾಸದಲ್ಲಿ ದಾಖಲೆಯಾಗಿದೆ. ಇಂತಹ ಜನಪರವಾದ ಯೋಜನೆಗಳನ್ನು ಯಾರು ಊಹೆ ಮಾಡಿರಲಿಲ್ಲ, ಯಾವ ರಾಜ್ಯಗಳಲ್ಲಿಯೂ ಅನುಷ್ಠಾನ ಮಾಡಲು ಸಾಧ್ಯವಾಗಿರಲಿಲ್ಲ ಎಂದರು.

ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಈ ಯೋಜನೆಗಳು ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದುಕೊಟ್ಟಿದೆ ಎಂದು ಹೇಳಿದರು.

ಪಕ್ಷಾತೀತ ಮತ್ತು ಜಾತ್ಯತೀತವಾಗಿ ಜಾರಿ ಮಾಡಿರುವ ಗ್ಯಾರಂಟಿ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಅಸಹಾಯಕರಿಗೆ ಯೋಜನೆಗಳಿಂದ ಲಾಭವಾಗಿದ್ದು, ಜನರು ಸಂತೃಪ್ತಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜಾರಿಯಾದ ಸಂದರ್ಭದಲ್ಲಿ ನಾನು ಬಿಜೆಪಿಯಲ್ಲಿದ್ದೆ. ಆಗ ಈ ಯೋಜನೆಗಳ ಹೆಸರಿನಲ್ಲಿ ಹಣ ಸೋರಿಕೆಯಾಗುತ್ತದೆ. ಬಿಟ್ಟಿ ಭಾಗ್ಯಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಚರ್ಚೆ ನಡೆಸಿದ್ದೇವು. ಆದರೀಗ ಅದೆಲ್ಲವೂ ಸುಳ್ಳಾಗಿದೆ ಎಂದರು.

ಈ ಜಿಲ್ಲೆಗೆ ಗ್ಯಾರಂಟಿ ಯೋಜನೆಗಳಿಂದ 2 ಸಾವಿರ ಕೋಟಿ ರುಪಾಯಿ ನೇರವಾಗಿ ಫಲಾನುಭವಿಗಳ ಕೈ ಸೇರಿದೆ. ಇದರಲ್ಲಿ 500 ಕೋಟಿ ರುಪಾಯಿ ಚನ್ನಪಟ್ಟಣ ತಾಲೂಕಿಗೆ ಹರಿದು ಬಂದಿದೆ ಎಂದು ಹೇಳಿದರು.

ಜಾಗೃತ ಕರ್ನಾಟಕದ ಎಚ್.ವಿ.ವಾಸು , ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗಡೆ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ), ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ