ಬೆಂಗಳೂರು : ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರದ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಆರ್.ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಕಾಲದಲ್ಲಿ ವಂಶಪಾರಂಪರ್ಯವಾಗಿ ದೇವಸ್ಥಾನಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಕುಟುಂಬಗಳಲ್ಲಿ ಜನ ಹೆಚ್ಚಾಗಿ ದೇವಸ್ಥಾನ ನಡೆಸುವ ವಿಚಾರದಲ್ಲಿ ವ್ಯಾಜ್ಯಗಳು ಆರಂಭವಾದವು. ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬ್ರಿಟಿಷರ ಕಾಲದಲ್ಲಿ ಮುಜರಾಯಿ ಇಲಾಖೆ ಪ್ರಾರಂಭವಾಯಿತು. ವಂಶಪಾರಂಪರ್ಯದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಒಂದು ಕಾಯ್ದೆ ತಂದರೆ ಇಡೀ ದೇಶಕ್ಕೆ ಅನ್ವಯವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರವೇ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದರು.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 35,500 ‘ಸಿ’ಗ್ರೇಡ್ ದೇವಸ್ಥಾನಗಳಿವೆ. ಹಿಂದಿನಿಂದಲೂ ಇವುಗಳ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ನಮ್ಮ ಸರ್ಕಾರ ಈ ದೇವಸ್ಥಾನಗಳ ಅಭಿವೃದ್ಧಿಗೆ ಮುಂದಾಗಿದೆ. ಈ ಸಿ ಗ್ರೇಡ್ ದೇವಸ್ಥಾನಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಅನುವಂಶಿಕ ಅರ್ಚಕರು ಇದ್ದಾರೆ. ಇವರಿಗೆ ಯಾವುದೇ ಸಂಬಳವಿಲ್ಲ. ಸರ್ಕಾರದಿಂದ ತಸ್ತಿಕ್ ಹಣ ನೀಡುತ್ತೇವೆ. ಈ ದೇವಸ್ಥಾನಗಳು ಹಾಗೂ ಅರ್ಚಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಒಂದು ವಿಧೇಯಕ ತಂದಿದ್ದು, ಅದಕ್ಕೆ ಬಿಜೆಪಿಗರು ವಿರೋಧಿಸುತ್ತಿದ್ದಾರೆ. ಧರ್ಮ, ದೇವರ ಹೆಸರಿನಲ್ಲಿ ವೋಟ್ ಕೇಳುವ ಬಿಜೆಪಿಗರು ದೇವರ ಹಾಗೂ ಧರ್ಮದ ಕೆಲಸ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ 205 ‘ಎ’ ಗ್ರೇಡ್ ಮತ್ತು 193 ‘ಬಿ’ ಗ್ರೇಡ್ ದೇವಸ್ಥಾನಗಳಿವೆ. ಪ್ರತಿ ದೇವಸ್ಥಾಕ್ಕೆ ಅಧ್ಯಕ್ಷ ಮತ್ತು 8 ಮಂದಿ ಸದಸ್ಯರು ಇದ್ದಾರೆ. ಅವರೇ ಈ ದೇವಸ್ಥಾನಗಳಿಂದ ಬರುವ ಆದಾಯ ಬಳಸಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.