15 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಮಡಿಲಿಗೆ ಕೊಪ್ಪಳ
ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಸೋಲು
ಸೋಮರಡ್ಡಿ ಅಳವಂಡಿ
ಹದಿನೈದು ವರ್ಷಗಳಿಂದ ಬಿಜೆಪಿಯೇ ಮೆರೆಯುತ್ತಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಡಾ. ಬಸವರಾಜ ಅವರನ್ನು ಪರಾಭವಗೊಳಿಸುವ ಮೂಲಕ ಬಿಜೆಪಿ ಕೋಟೆಯನ್ನು ಛಿದ್ರಗೊಳಿಸಿದ್ದಾರೆ.
ಪ್ರಾರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ರಾಜಶೇಖರ ಹಿಟ್ನಾಳ ಅಂತರ ತೀರಾ ಕಡಿಮೆ ಇದ್ದಿದ್ದರಿಂದ ಭಾರಿ ಕುತೂಹಲಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಬಿಜೆಪಿ 76 ಮತಗಳ ಮುನ್ನಡೆ ಸಾಧಿಸಿದಾಗ ಬಿಜೆಪಿಯಲ್ಲಿ ಆಶಾಭಾವನೆ ಮೂಡಿತ್ತಾದರೂ ಅದು ಬಹಳ ಹೊತ್ತು ನಿಲ್ಲಲಿಲ್ಲ. ನಂತರದ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲು ಪ್ರಾರಂಭಿಸಿದ್ದು ಮತ್ತೆ ಹಿನ್ನಡೆ ಕಾಣಲೇ ಇಲ್ಲ. 12-13 ನೇ ಸುತ್ತಿನವರೆಗೂ ಅತ್ಯಂತ ಕಡಿಮೆ ಅಂತರವಿತ್ತು. ನಂತರ ಕಾಂಗ್ರೆಸ್ ನಡೆದಿದ್ದೆ ದಾರಿ ಎನ್ನುವಂತೆ ಆಯಿತು. ಲೀಡ್ ಹೆಚ್ಚಳವಾಗುತ್ತಲೇ ಸಾಗಿ ಕೊನೆಯ ವೇಳೆ ಸುಮಾರು 46357 ಮತಗಳ ಅಂತರದಿಂದ ಗೆಲುವು ನಿರ್ಧಾರವಾಯಿತು.
ಈ ಬಾರಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿಸಿ, ಹೊಸ ಮುಖ ಡಾ. ಬಸವರಾಜ ಅವರಿಗೆ ಮಣೆ ಹಾಕಿ ಹೊಸ ಪ್ರಯೋಗ ಮಾಡಿತಾದರೂ ಯಶಸ್ಸು ಕಾಣಲಿಲಿಲ್ಲ.
ಒಗ್ಗಟ್ಟು ಪ್ರದರ್ಶನ:
ಸಿರಗುಪ್ಪ ಕ್ಷೇತ್ರದಲ್ಲಿ 21,225 ಮತಗಳ ಲೀಡ್ ಕಾಂಗ್ರೆಸ್‌ಗೆ ಬಂದಿದ್ದು ವಿಶೇಷವಾಯಿತು. ಉಳಿದಂತೆ ಕನಕಗಿರಿ, ಯಲಬುರ್ಗಾ, ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಪಡೆದುಕೊಂಡರೆ ಬಿಜೆಪಿ ಹಿನ್ನಡೆ ಪಡೆಯಿತು. ಕುಷ್ಟಗಿ ಮತ್ತು ಸಿಂಧನೂರು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಸ್ವಲ್ಪ ಮುನ್ನಡೆ ಸಾಧಿಸಿದಂತೆ ಆಯಿತು. ಪರಿಣಾಮ ಕಾಂಗ್ರೆಸ್ ಗೆಲುವಿನತ್ತ ಸಾಗಿ, ಅಂತಿಮವಾಗಿ ರಾಜಶೇಖರ ಹಿಟ್ನಾಳ ಅವರ ಗೆಲುವು ಘೋಷಣೆ ಮಾಡಲಾಯಿತು.
ಇದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಾವೇ ಸ್ಪರ್ಧೆ ಮಾಡಿದಂತೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡರು.
ಇದರ ಜೊತೆಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಗಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದರು. ಎಂಟು ಕ್ಷೇತ್ರಗಳಲ್ಲಿ ಸುತ್ತಾಡಿ, ಅಲ್ಲಿದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ಹೈಕಮಾಂಡ್ ಸಹಾಯದೊಂದಿಗೆ ಇತ್ಯರ್ಥ ಮಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ, ತುಂಗಭದ್ರಾ ಕಾಡಾ ಅಧ್ಯಕ್ಷರ ನೇಮಕವನ್ನು ಮುತುವರ್ಜಿ ವಹಿಸಿ ಮಾಡಿಸುವ ಮೂಲಕ ಪಕ್ಷದ ಬಲ ಹೆಚ್ಚಳವಾಗುವಂತೆ ಮಾಡುತ್ತಲೇ ತಮ್ಮ ಸಹೋದರನ ಗೆಲುವಿಗೆ ವೇದಿಕೆ ಸಿದ್ಧಗೊಳಿಸಿದರು. ಇದರ ಜೊತೆಗೆ ಅಹಿಂದ ಮತಗಳ ಕ್ರೂಢೀಕರಣ ಮಾಡಿದ್ದು ಅನುಕೂಲವಾಗಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿನ ಲಿಂಗಾಯತ ಮತಗಳು ಚದುರಿ ಹೋಗುವ ಪ್ರಮಾಣವನ್ನು ತಡೆಯುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾದರು. ಅದರ ಪರಿಣಾಮ ಗೆಲುವು ಸುಲಭವಾಯಿತು.ಮುಗಿಲು ಮುಟ್ಟಿದ ಸಂಭ್ರಮ:ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಸಾಧಿಸುತ್ತಿದ್ದಂತೆ ವಿಜಯೋತ್ಸವ ಸಂಭ್ರಮ ಮುಗಿಲುಮುಟ್ಟಿತ್ತು.
ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಕಾಲೇಜು ಮೈದಾನದ ಎದುರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರೂ ಸಹ ಲೆಕ್ಕಿಸದೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು. ಬಣ್ಣ ಎರಚಾಡಿ, ಕೇಕೆ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿದರು.ಬೈಕ್ ರ್‍ಯಾಲಿ ಭರ್ಜರಿಯಾಗಿ ನಡೆಯಿತು. ಕೊಪ್ಪಳ ನಗರದ ರಸ್ತೆಗಳುದ್ದಕ್ಕೂ ವಿಜಯೋತ್ಸವ ಆಚರಣೆ ಮಾಡಲಾಯಿತು.
ಗವಿಮಠಕ್ಕೆ ಭೇಟಿ:ಗೆಲುವು ಸಾಧಿಸುತ್ತಿದ್ದಂತೆ ರಾಜಶೇಖರ ಹಿಟ್ನಾಳ ನಗರದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಗದ್ದುಗೆ ದರ್ಶನ ಪಡೆದು, ಶ್ರೀಗಳ ಆಶೀರ್ವಾದ ಪಡೆದರು. ಅಲ್ಲಿಂದ ನಗರದಾದ್ಯಂತ ಮೆರವಣಿಗೆ ನಡೆಸಲಾಯಿತು.