ಕನ್ನಡಪ್ರಭ ವಾರ್ತೆ ರಾಯಚೂರು
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಅತೀ ದೊಡ್ಡ ಅನ್ಯಾಯ ಮಾಡಿದ್ದು, ಈ ಸತ್ಯ ಜನರಿಗೆ ತಿಳಿಸಿ ಮನವರಿಕೆ ಮಾಡಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.ನಗರದ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ನಡೆದ ವಿಜಯಯಾತ್ರೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್‌ಸಿಪಿ, ಟಿಎಸ್‌ಪಿ ಹಣ ಬೇರೆ ಉದ್ದೇಶಕ್ಕೆ ಬಳಸಿದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಕಾನೂನು ರೂಪಿಸಿದ ಕಾಂಗ್ರೆಸ್ ಸರ್ಕಾರ, ಈಗ ಎಸ್‌ಸಿಪಿ, ಟಿಎಸ್‌ಪಿಗೆ ಮೀಸಲಿಟ್ಟಿದ್ದ 11,500 ಕೋಟಿ ರು. ಗ್ಯಾರಂಟಿಗೆ ಬಳಸಿದೆ. ಬಜೆಟ್ ಬಳಿಕವೂ ₹14 ಸಾವಿರ ಕೋಟಿ ಬಳಸಿಕೊಳ್ಳಲು ಮುಂದಾಗಿದೆ. ಅಂಬೇಡ್ಕರ್, ವಾಲ್ಕೀಕಿ, ಆದಿ ಜಾಂಬವ, ಭೋವಿ ಅಭಿವೃದ್ಧಿ ನಿಗಮಗಳಿಗೆ ನೀಡುತ್ತಿದ್ದ ಸಬ್ಸಿಡಿ ಹಣ ಸಂಪೂರ್ಣ ಕಡಿತಗೊಳಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಒಂದೇ ಗಂಗಾ ಕಲ್ಯಾಣ ನೀಡಲಾಗಿದೆ. ಈ ಸತ್ಯಗಳನ್ನು ಜನರಿಗೆ ತಿಳಿಸಲು ಬಂದಿದ್ದೇವೆ ಎಂದರು.
ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಮೊದಲು ಜಾರಿಗೆ ತರಲು ಮುಂದಾಗಿದ್ದೆ ಬಿಜೆಪಿ ಸರ್ಕಾರ. ಆದರೆ, ಸರ್ಕಾರ ಪತನಗೊಂಡ ಕಾರಣಕ್ಕೆ ಅದು ಜಾರಿಯಾಗಲಿಲ್ಲ. ಒಳಮೀಸಲಾತಿ ಪರ ಇದ್ದೇನೆ ಎಂದಿದ್ದ ಸಿಎಂ ಸಿದ್ದರಾಮಯ್ಯ ಅಯ್ಯೋ ಅದೆಲ್ಲ ಮಾಡೋಕಾಗಲ್ಲ ಎಂದು ಉಲ್ಟಾ ಹೊಡೆದಿದ್ದರು. ದಲಿತ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿ ಗಣತಿ ಕಡ್ಡಾಯವಾಗಿ ಮಾಡಬೇಕು. ಅಂದಾಗಲೇ ಯಾವ ಸಮುದಾಯಗಳಿಗೆ ಏನು ಸೌಲಭ್ಯ ನೀಡಬಹುದು ಎಂಬುದು ಗೊತ್ತಾಗುತ್ತದೆ. ಆದರೆ, ದಲಿತರಿಗೆ ಮೀಸಲಾತಿ ಸಿಗುತ್ತಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ಸರಿಯಲ್ಲ. ಯಾವುದೇ ಹುದ್ದೆಗಳಿದ್ದರೂ ಮೀಸಲಾತಿಯಡಿಯೇ ನೀಡಲಾಗುತ್ತದೆ. ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಬೆರಳೆಣಿಯಷ್ಟೇ ದಲಿತರನ್ನು ಐಎಎಸ್ ಮಾಡಿದೆಯೇ ಎಂದು ಪ್ರಶ್ನಿಸಿದರು.
ಸಮಾವೇಶದಲ್ಲಿ ಎಂಆರ್‌ಎಚ್‌ಎಸ್‌ನ ಮುಖಂಡ ಮಂದಕೃಷ್ಣ ಮಾದಿಗ, ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿದರು.ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಮುಖಂಡರಾದ ರವೀಂದ್ರ ಜಲ್ದಾರ್, ಎಂ.ವಿರೂಪಾಕ್ಷಿ ಸೇರಿದಂತೆ ಮೈತ್ರ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.ಜಿಲ್ಲೆ ಬಿಸಿಲು ಹೆಚ್ಚಳಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕಾರಣ
ಜಿಲ್ಲೆಯಲ್ಲಿ ಬಿಸಿಲು ಹೆಚ್ಚಳಕ್ಕ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಕಾರಣರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಆರೋಪಿಸಿದರು.ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಬೇರೆ ಜಿಲ್ಲೆಗಳಲ್ಲಿ ವಿರೋಧ ವ್ಯಕ್ತಪಡಿಸಿದರು. ಆದರೆ ಈ ಹಿಂದೆ ಡಿಸಿಯಾಗಿದ್ದ ಹಾಗೂ ಕೆಪಿಸಿ ಎಂಡಿಯಾಗಿದ್ದ ಜಿ.ಕುಮಾರ ನಾಯಕ ಅವರು ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಜಿಲ್ಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಕರೆಂಟ್ ಉತ್ಪಾದಿಸಲು ಕಲ್ಲಿದ್ದಲು ಸುಡುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ಈ ಭಾಗದಲ್ಲಿ ಸಕೆ ಹೆಚ್ಚಾಗಲು ಕಾರಣವಾಗಿದೆ. ಅದರಿಂದಲೆಯೇ ಜಿಲ್ಲೆ ಜನ 44 ರಿಂದ 46 ಡಿಗ್ರಿ ಸೆಲ್ಸಿಯ್ಸ್ ಗರಿಷ್ಠ ತಾಪಮಾನದಿಂದ ಜನ ತತ್ತರಿಸುತ್ತಿದ್ದಾರೆ ಎಂದು ದೂರಿದರು.