ಹುಬ್ಬಳ್ಳಿ: ಸಂವಿಧಾನಕ್ಕೆ ಅತೀ ಹೆಚ್ಚು ಅಪಮಾನ ಮಾಡಿದ್ದೇ ಕಾಂಗ್ರೆಸ್. ಆದರೆ, ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರೇ ಇವತ್ತು ಸಂವಿಧಾನ ರಕ್ಷಕರು ನಾವೇ ಅನ್ನೋ ರೀತಿಯಲ್ಲಿ ಪೋಸ್ ಕೊಡುತ್ತಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಅತಿಹೆಚ್ಚು ತಿದ್ದುಪಡಿ ಮಾಡಿದವರೇ ಕಾಂಗ್ರೆಸ್ಸಿಗರು. ಸಾಮಾಜಿಕ, ಆರ್ಥಿಕ, ಗಡಿ, ಭದ್ರತೆ ಬಗ್ಗೆ ತಿದ್ದುಪಡಿ ಮಾಡಲಿಲ್ಲ. ನೆಹರು ಪಾಲಿಸಿ ಟೀಕೆ ಮಾಡಿದ್ದಕ್ಕೆ ತಿದ್ದುಪಡಿ ಮಾಡಿದರು ಎಂದರು.
ಖುರ್ಚಿ ಉಳಿಸಿಕೊಳ್ಳಲು ತಿದ್ದುಪಡಿ:ಇಂದಿರಾ ಗಾಂಧಿ ಅವರ ಖುರ್ಚಿ ಉಳಿಸಿಕೊಳ್ಳಲು ಸಂವಿಧಾನ ಬದಲಾವಣೆ ಮಾಡಲಾಯಿತು. 1975ರಲ್ಲಿ ಸಂವಿಧಾನದ ಮೇಲೆ ಆದಂತ ದೊಡ್ಡ ಆಕ್ರಮಣ ಅದು. ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಆಯ್ಕೆ ಅನುರ್ಜಿತಗೊಳಿಸಿದ ನಂತರ 38, 39, 42ನೇ ವಿಧಿಗಳಿಗೆ ಬದಲಾವಣೆ ಮಾಡಲಾಯಿತು. ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪರಾಷ್ಟ್ರಪತಿ ಚುನಾವಣೆಯನ್ನು ಪ್ರಶ್ನಿಸುವಂತಿಲ್ಲ ಎಂದು ಬದಲಾವಣೆ ಮಾಡಲಾಯಿತು ಎಂದು ಹೇಳಿದರು.
ಸತ್ಯವನ್ನು ಸದಾಕಾಲ ಬಚ್ಚಿಟ್ಟು ನಮ್ಮ ದೇಶದ ಚರಿತ್ರೆಯನ್ನು ವಿಕೃತಿಯಾಗಿ ತೋರಿಸುವ ಪ್ರಯತ್ನ ನಡೆಯಿತು. ಹೀಗಾಗಿ, ಅದರ ಅರಿವು ಉಂಟು ಮಾಡಲು ಕಾರ್ಯಕ್ರಮ ನಡಿದಿವೆ. ನಮ್ಮ ಅರಿವಿಗೆ ಹಲವು ವಿಷಯಗಳು ಗೊತ್ತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿವೆ ಎಂದರು.
ಭಯೋತ್ಪಾದಕರೆಲ್ಲ ಖಲಾಸ್: ಭಾರತಕ್ಕೆ ಬೇಕಾದ ಉಗ್ರರು ಬಹುತೇಕ ಖಲಾಸ್ ಆಗಿದ್ದಾರೆ. ಇನ್ನು ಮುಂದೆ ಪಾಕಿಸ್ತಾನ ಕೆಮ್ಮಿದರೆ ಭಾರತದ ಸೈನ್ಯ ಒಳಹೋಗಿ ಏನು ಮಾಡಬೇಕು, ಅದನ್ನು ಮಾಡುತ್ತದೆ ಎಂದರು.