ಕನ್ನಡಪ್ರಭ ವಾರ್ತೆ ಇಂಡಿ
ಕಾಂಗ್ರೆಸ್ ಈ ದೇಶಕ್ಕೆ ಭದ್ರ ಬುನಾದಿ ಹಾಕಿದೆ. ಅಣ್ಣ ಬಸವಣ್ಣನವರ ವಿಚಾರದಂತೆ ಸಮಾನತೆಯ ಹಾದಿಯಲ್ಲಿ ಪಕ್ಷ ಸಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಸಾಲೋಟಗಿಯಲ್ಲಿ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರವಾಗಿ ಭರ್ಜರಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನದಂತೆ ನಡೆಯುತ್ತಿದ್ದೇವೆ. ಅದಕ್ಕೆ ನೀವೀಗ ನೀಡುವ ಒಂದು ಮತ ಮತ್ತಷ್ಟು ಶಕ್ತಿ ನೀಡಲಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸುಳ್ಳಿನ ಮೂಲಕ ಅಧಿಕಾರ ಮಾಡುತ್ತಿದ್ದಾರೆ ಎಂದು ದೂರಿದರು.
ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಹೆದರಿಸುತ್ತಿದ್ದಾರೆ. ಇದೆಲ್ಲಕ್ಕೂ ಮುಕ್ತಿ ನೀಡಬೇಕು. ಈ ದೇಶದ ಜನ ಬ್ರಿಟಿಷರನ್ನೇ ಸಹಿಸಿಕೊಂಡಿಲ್ಲ. ಈ ಬಿಜೆಪಿಯವರು ಯಾವ ಲೆಕ್ಕ ಎಂದು ಕೇಳಿದ ಯಶವಂತರಾಯಗೌಡ, ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ರಾಜು ಆಲಗೂರ ಅವರನ್ನು ಆರಿಸಿ ಕಳಿಸಿದರೆ ನೀವೇ ಗೆದ್ದಂತೆ ಎಂದು ಮನವಿ ಮಾಡಿದರು.ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಇಂಡಿ ಭಾಗದ ಲಿಂಬೆ ಬೆಳೆಗೆ ಅಗತ್ಯ ಬೆಲೆ ನೀಡುವ ಕಾರ್ಯವಾಗಬೇಕು. ದ್ರಾಕ್ಷಿ ಬೆಳೆಗಾರರ ಸಂಕಟವನ್ನು ಕಡಿಮೆ ಮಾಡಬೇಕಿದೆ. ಹೆಚ್ಚಿನ ರೈಲು ಓಡಿಸುವುದು, ವಿಮಾನಯಾನಕ್ಕೆ ಒತ್ತು ನೀಡಿದರೆ ಜಿಲ್ಲೆ ತುಂಬ ಪ್ರಗತಿ ಸಾಧಿಸಲಿದೆ ಎಂದು ಹೇಳಿದರು.
ತಾವು ನನಗೆ ಮತ ನೀಡಿದರೆ ಆಲಮಟ್ಟಿ ಎತ್ತರ ಹೆಚ್ಚಿಸಲು ಹೋರಾಟ ಮಾಡುತ್ತೇನೆ. ಸದ್ಯದ ಸಂಸದರು ಯಾವೊಂದು ಕೆಲಸ ಮಾಡಿಲ್ಲ. ನೀವು ಬದಲಾವಣೆಯ ಮನಸ್ಸು ಮಾಡಿದರೆ ಈ ಲೋಕಸಭೆ ಕ್ಷೇತ್ರದ ಚಿತ್ರಣವೇ ಬದಲಾಗುತ್ತದೆ. ಭೂಮಿ ಕೂಡ ಮೂರು ವರ್ಷಕ್ಕೆ ಹೊಸ ಬೆಳೆ ಕೊಡುತ್ತದೆ. ಹಾಗಾಗಿ ಮತದಾರರು ಮನಸ್ಸು ಮಾಡಿ ಎಂದು ಕೇಳಿಕೊಂಡರು.ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು. ಗುರಣ್ಣಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶಾಂತಯ್ಯಸ್ವಾಮಿ, ಭದ್ರಯ್ಯ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಮುಖಂಡರಾದ ಎಮ್.ಆರ್. ಪಾಟೀಲ, ಇಲಿಯಾಸ ಬೋರಾಮಣಿ, ಜಾವೇದ್ ಮೊಮಿನ್, ಶಿವಯೋಗಪ್ಪ ಚನಗೊಂಡ, ಶೇಖಪ್ಪ ರೂಗಿ, ಕಲಪ್ಪ ಗುಡಮಿ, ಜಟ್ಟೆಪ್ಪ, ಸತ್ತಾರ ಬಾಗವಾನ, ಶಿವಾನಂದ ಹಾವಿನಾಳ, ರಶೀದ್ ಸೇರಿದಂತೆ ಅನೇಕರಿದ್ದರು.