ಮತದಾನ ಮಾಡಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷ ಮಾಡಿದ ಆಡಳಿತ ಜನರಲ್ಲಿ ನಿರಾಸೆ ಮೂಡಿಸಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಮತದಾನ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತದೆ ಎನ್ನುತ್ತಿದ್ದಾರೆ. ಆದರೆ ಆ ರೀತಿಯ ವಾತಾವರಣ ಇಲ್ಲ ಎಂದರು.ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ:
ರಾಯರಡ್ಡಿ ಅವರೊಂದಿಗೆ ಮತಕೇಂದ್ರದವರೆಗೂ ಹೆಜ್ಜೆ ಹಾಕಿ ಸಾಥ್ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ್, ರಾಜಶೇಖರ ಹಿಟ್ನಾಳ 1.5 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲ ಆಗಿವೆ. ರೈತರು, ಮಹಿಳೆಯರು, ಯುವಕರು, ಹಿರಿಯರು ಎಲ್ಲರೂ ಕಾಂಗ್ರೆಸ್‌ಗೆ ಬೆಂಬಲವಾಗಿ ನಿಂತಿದ್ದಾರೆ. ಈ ಉತ್ಸಾಹ ನೋಡಿದಾಗ ಗೆಲುವು ನಿಶ್ಚಿತ ಎಂದರು.
ಪ್ರಧಾನಿ ಮೋದಿ ಮೇಲೆ ಜನರ ವಿಶ್ವಾಸ:ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿರುವ ವಿಶ್ವಾಸ ಜನರನ್ನು ಉತ್ಸಾಹದಿಂದ ಬಿಜೆಪಿಗೆ ಮತ ನೀಡುವಂತೆ ಮಾಡಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಸಂಸತ್ತಿನಲ್ಲಿ ಕೊಪ್ಪಳ ಪ್ರತಿನಿಧಿಯಾಗಿ ಸೇವೆ ಮಾಡಲಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮೊಮ್ಮಗಳು ವೀಕ್ಷಾಳನ್ನು ಎತ್ತಿಕೊಂಡು ಮತದಾನ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನರ ಉತ್ಸಾಹ, ಮೋದಿ ಮೇಲೆ ಜನರಿಟ್ಟಿರುವ ವಿಶ್ವಾಸದಿಂದ ಎಲ್ಲ ಮತಗಟ್ಟೆಯಲ್ಲಿ ಜನರು ಮತದಾನ ಮಾಡಿದ್ದಾರೆ. ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಬೇಕಾದ ಸಂಕಲ್ಪವನ್ನು ಪ್ರತಿಯೊಬ್ಬ ಮತದಾರ ಈಡೇರಿಸಲಿದ್ದಾರೆ. ಕ್ಯಾವಟರ್ ಈ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿಗೆ ಬಲ ನೀಡಲಿದ್ದಾರೆ ಎಂದರು.