ಹಾವೇರಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸರಿಯಾಗಿಲ್ಲ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ಗೆ ಸಂವಿಧಾನ ಹಾಗೂ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಕಿಡಿಕಾರಿದರು.
ಚುನಾವಣಾ ಆಯೋಗ, ಸಂವಿಧಾನ ಹಾಗೂ ಸ್ವತಂತ್ರ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಅಪನಂಬಿಕೆ ಮೂಡಿಸುತ್ತಿದೆ. ತಮ್ಮ ಪಕ್ಷ ಸೋತಾಗ `ವೋಟ್ ಚೋರಿ'''''''' ಎಂದು ಆರೋಪಿಸುವುದು, ಗೆದ್ದಾಗ ಅದನ್ನು ಜನಾದೇಶ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಈಗ ಕಾಂಗ್ರೆಸ್ ಸೋತ 84 ಪ್ರದೇಶಗಳಲ್ಲಿ `ಭಾರತ ಜೋಡೋ'''''''' ಹೆಸರಿನಲ್ಲಿ ಪಾದಯಾತ್ರೆ ನಡೆಸಲಾಗಿದೆ. ಕಾಂಗ್ರೆಸ್ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತ ಸಂಪೂರ್ಣ ಕುಸಿದಿದೆ. ಭೀಕರ ಬರಗಾಲದ ನಡುವೆಯೂ ರೈತರಿಗೆ ಕೇವಲ ತಲಾ 2500 ರು. ಪರಿಹಾರ ನೀಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಮಹಿಳೆಯರು, ವೃದ್ಧರು ಹಾಗೂ ವಿಶೇಷಚೇತನರಿಗೆ ಪಿಂಚಣಿ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ, ಪಿಂಚಣಿ ನೀಡಲೂ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಕುರಿತು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ. ವಿಪಕ್ಷಗಳು ಚುನಾವಣೆಯಲ್ಲಿ ಗೆದ್ದಾಗ ಸುಮ್ಮನಿದ್ದು. ಜನಾದೇಶ ತಮ್ಮ ವಿರುದ್ಧ ಬಂದಾಗ ಮಾತ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತವೆ. ಕಾಂಗ್ರೆಸ್ ತಕ್ಷಣದ ರಾಜಕೀಯ ಲಾಭಕ್ಕಾಗಿ ಚುನಾವಣಾ ಆಯೋಗ ಹಾಗೂ ಅದರ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿರುವುದು ಅಕ್ಷಮ್ಯ. ಹಾವೇರಿ ಜಿಲ್ಲೆಯಲ್ಲಿಯೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಮೃತಪಟ್ಟವರು ಹಾಗೂ ಎರಡು-ಮೂರು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದವರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಎಸ್‌ಐಆರ್ ಕುರಿತು ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವುಗಳನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಡಿಜೆಗೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಚಿಕ್ಕೇರೂರಿನಲ್ಲಿ ಗಣೇಶನ ಮೂರ್ತಿಯನ್ನು ವಾಪಸ್ ತಂದು ಇರಿಸಿರುವುದು ಸರಿಯಲ್ಲ, ಗಣೇಶ ಮೆರವಣಿಗೆಗೆ ಯಾವುದೇ ಮಾರ್ಗದಲ್ಲಿ ಅನುಮತಿ ಕೇಳಿದ್ದರೂ, ಕಾನೂನು ಸುವ್ಯವಸ್ಥೆ ಕಾಪಾಡುವ ರೀತಿಯಲ್ಲಿ ಅನುಮತಿ ನೀಡಬೇಕು. ಅನಗತ್ಯವಾಗಿ ಮಾರ್ಗ ನಿರ್ಬಂಧ ಹೇರುವ ಮೂಲಕ ಪೊಲೀಸ್ ವ್ಯವಸ್ಥೆ ಬಳಸಿಕೊಳ್ಳುವುದು ಸರಿಯಲ್ಲ. ನಾವು ಭಾರತದಲ್ಲಿದ್ದೇವೆ, ಬೇರೆ ದೇಶದಲ್ಲಿಲ್ಲ. ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಕೆರೆ ತುಂಬಿಸುವಲ್ಲಿ ವಿಫಲ: ರಾಜ್ಯಾದ್ಯಂತ ಬರ ಪರಿಸ್ಥಿತಿ ಇದ್ದು, ಕಾಂಗ್ರೆಸ್ ನಾಯಕರು ಎಸ್‌ಐಆರ್ ಕುರಿತು ರಾಜಕೀಯ ಮಾಡುವ ಬದಲು ಬರದಿಂದ ಸಂಕಷ್ಟಕ್ಕೊಳಗಾಗಿರುವ ಜನರ ಸಮಸ್ಯೆಗಳತ್ತ ಗಮನಹರಿಸಬೇಕು. ಜಿಲ್ಲೆಯ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಏತ ನೀರಾವರಿ ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಅವುಗಳ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸ ನಡೆಯುತ್ತಿಲ್ಲ ಎಂದು ಬಿ.ಸಿ.ಪಾಟೀಲ ಆರೋಪಿಸಿದರು.