ಪ್ರಶ್ನೆ ಮಾಡುವರ ಬಾಯಿ ಬೀಗ ಹಾಕ್ತಿದೆ ಕಾಂಗ್ರೆಸ್‌

KannadaprabhaNewsNetwork | Published : Mar 23, 2025 1:32 AM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹನಿಟ್ರ್ಯಾಪ್ ವಿಚಾರದಲ್ಲಿ ಕೈ ನಾಯಕರ ಕೈವಾಡ ಇದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಪ್ರಶ್ನಿಸಿದ್ದರೂ ಆಡಳಿತ ಪಕ್ಷದಿಂದ ಉತ್ತರ ಬರುತ್ತಿಲ್ಲ. ಆದರೆ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ಎಷ್ಟು ಸರಿ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಹಿಂಡಸಗಟ್ಟ ಲಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು

ಕನ್ನಡಪ್ರಭ ವಾರ್ತೆ ಹರಿಹರ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹನಿಟ್ರ್ಯಾಪ್ ವಿಚಾರದಲ್ಲಿ ಕೈ ನಾಯಕರ ಕೈವಾಡ ಇದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಪ್ರಶ್ನಿಸಿದ್ದರೂ ಆಡಳಿತ ಪಕ್ಷದಿಂದ ಉತ್ತರ ಬರುತ್ತಿಲ್ಲ. ಆದರೆ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ಎಷ್ಟು ಸರಿ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಹಿಂಡಸಗಟ್ಟ ಲಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹನಿಟ್ರ್ಯಾಪ್ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸಹಕಾರಿ ಸಚಿವ ರಾಜಣ್ಣ 48 ಶಾಸಕರ ಮೇಲೆ ಹನಿಟ್ರ್ಯಾಪ್ ಆಗಿರುವ ಸಾಧ್ಯತೆ ಇದೆ. ಹನಿಟ್ರ್ಯಾಪ್‍ನಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಪುಷ್ಠಿಕರಿಸಿದ್ದಾರೆ ಎಂದರು.ಹರಿಹರದ ಶಾಸಕ ಬಿ.ಪಿ. ಹರೀಶ್ ಈ ಭಾಗದ ರೈತರು ಹಾಗೂ ನೀರಾವರಿ ಸಂಬಂಧ ಪಟ್ಟಂತೆ ಅನೇಕ ವಿಚಾರಗಳನ್ನು ವಿಧಾನಸಭೆಯಲ್ಲಿ ಚರ್ಚಿಸಿದ್ದಾರೆ. ಕ್ಷೇತ್ರದ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತರುವ ಮುನ್ನವೇ ಕಲಾಪಕ್ಕೆ ಅಡ್ಡಿ ಪಡಿಸುತ್ತಾರೆ ಎಂಬ ಉದ್ದೇಶದಿಂದ ಬಿಜೆಪಿ ನಾಯಕರನ್ನು ಅಮಾನತು ಮಾಡಿರುವುದು ಬೇಸರದ ಸಂಗತಿ ಎಂದರು.ಬೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ತಲುಪದೇ ಇರುವುದು. ಕಾಲುವೆಗಳು ಹೂಳು ತೆಗೆಯುವುದಕ್ಕೆ ಅನುದಾನ ನೀಡುವುದು. ತಾಲೂಕಿನ ರಸ್ತೆಗಳ ಅಭಿವೃದ್ಧಿ. ಹೊಸಪೇಟೆ-ಶಿವಮೊಗ್ಗ ರಸ್ತೆ ಅಭಿವೃದ್ಧಿಗೆ ಅನುದಾನ. ಹರಿಹರ ನಗರಕ್ಕೆ ಕೈಗಾರಿಕೆಗಳ ಸ್ಥಾಪನೆಗೆ ಸಚಿವರ ಗಮನ ಸೆಳೆಯುವ ಶಾಸಕ ಬಿ.ಪಿ. ಹರೀಶ್‍ರನ್ನು ಅಮಾನತಿನಲ್ಲಿಡುವುದು ಎಷ್ಟು ಸರಿ ಎಂದರು.ಶಾಸಕರನ್ನು ಅಮಾನತು ಮಾಡುವ ಮೂಲಕ ಪ್ರಶ್ನೆ ಮಾಡುವವರ ಬಾಯಿಗೆ ಬೀಗ ಹಾಕುವ ಕಾರ್ಯ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿದೆ. ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಸದನದಲ್ಲಿ ಹನಿಟ್ರ್ಯಾಪ್ ವಿಷಯ ಚರ್ಚೆಗೆ ಬಂದರೆ ಇವರ ಬಂಡವಾಳ ಬಯಲಿಗೆ ಬರುತ್ತದೆ ಎಂಬ ಭಯ ಕಾಡುತ್ತಿದೆ ಎಂದು ಲೇವಡಿ ಮಾಡಿದರು.ಸದನದ ಒಳಗಿನಿಂದ ಶಾಸಕರನ್ನು ಮಾರ್ಷಲ್‍ಗಳು ಎತ್ತಿಕೊಂಡು ಹೊರಗೆ ಹಾಕುವುದು ನೋಡಿದರೆ, ಕಾಂಗ್ರೆಸ್ ಸರ್ಕಾರದ ದುರುದ್ದೇಶ ಏನೆಂಬುದು ಗೊತ್ತಾಗುತ್ತದೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಿ.ಟಿ ರವಿ ಅವರನ್ನು ಸದನದೊಳಗೆ ಪೊಲೀಸರು ಬಂದು ಕರೆದುಕೊಂಡು ಹೋಗುವ ದೃಶ್ಯಾವಳಿ ನೋಡಿದ್ದೇವೆ. ವಿಧಾನಸೌಧದ ಒಳಗೆ ಪೊಲೀಸರು ಏಕೆ ಬಂದರು ಎಂದು ಪ್ರಶ್ನಿಸಿದರು.

ಹನಿಟ್ರ್ಯಾಪ್ ಎಲ್ಲಾ ಪಕ್ಷದಲ್ಲಿಯೂ ಅನೇಕ ನಾಯಕರಿಗಾಗುತ್ತಿರುವ ದೊಡ್ಡ ಮೋಸದ ಜಾಲವಾಗಿದೆ ಇದನ್ನು ಮಟ್ಟ ಹಾಕಿ ಎಂದು ಕಾಂಗ್ರೆಸ್ ಪಕ್ಷದವರು ಸಹ ಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ದುರಾಡಳಿತವನ್ನು ಬಿಜೆಪಿ ಖಂಡಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ನಗರಸಭಾ ಸದಸ್ಯ ಆಟೋ ಹನುಮಂತಪ್ಪ, ಮುಖಂಡರಾದ ರಾಜು ರೋಖಡೆ, ವಿನಾಯಕ ಆರಾಧ್ಯಮಠ, ವೀರೇಶ್ ಆದಪುರ, ಸುನೀಲ್ ಕುಮಾರ್, ಸಂತೋಷ ಕುಮಾರ್ ಉಪಸ್ಥಿತಿತರಿದ್ದರು.

Share this article