ಬಿಜೆಪಿ-ಹಿಂದು ಸಂಘಟನೆಗಳ ವಿರುದ್ಧ ಕಾಂಗ್ರೆಸ್‌ ದ್ವೇಷ ರಾಜಕಾರಣ: ನಳಿನ್ ಆರೋಪ

KannadaprabhaNewsNetwork |  
Published : Oct 29, 2023, 01:01 AM IST
ನಳಿನ್‌ ಕುಮಾರ್‌ ಕಟೀಲ್‌ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದುತ್ವ ಪರವಾದ ಸಂಘಟನೆಗಳ ವಿರುದ್ಧ ವಿನಾ ಕಾರಣ ಕೇಸು ದಾಖಲಿಸುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದುತ್ವ ಪರವಾದ ಸಂಘಟನೆಗಳ ವಿರುದ್ಧ ವಿನಾ ಕಾರಣ ಕೇಸು ದಾಖಲಿಸುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಯಾಶೀಲ ಜನಪ್ರತಿನಿಧಿಗಳ ಮೇಲೂ ಕೇಸು ದಾಖಲಿಸಿ ಅವರ ಹಕ್ಕುಗಳಿಗೂ ದಿದ್ಬಂಧನ ವಿಧಿಸಲಾಗುತ್ತಿದೆ ಎಂದರು. ಕೋಲಾರದಲ್ಲಿ ಉಸ್ತುವಾರಿ ಸಚಿವರ ಸಭೆಗೆ ತೆರಳುತ್ತಿದ್ದ ಸಂಸದರನ್ನು ಪೊಲೀಸ್‌ ವರಿಷ್ಠಾಧಿಕಾರಿ ಹೊರಗೆ ಕ‍ಳುಹಿಸಿದ ವಿದ್ಯಮಾನ ನಡೆದಿದೆ. ದ.ಕ.ದ ಬೆಳ್ತಂಗಡಿಯಲ್ಲಿ ಅಲ್ಲಿನ ಶಾಸಕರು ಜನಸಾಮಾನ್ಯ ಹಾಗೂ ರೈತರ ಪರ ದನಿ ಎತ್ತಿದಾಗ ಅವರ ವಿರುದ್ಧವೇ ಕೇಸು ದಾಖಲಿಸಿ ಹೋರಾಟವನ್ನು ದಮನಿಸುವ ಕೆಲಸ ಮಾಡಲಾಗಿದೆ ಎಂದರು. ಬೆಳ್ತಂಗಡಿಯ ಕಳಂಜ ಗ್ರಾಮದಲ್ಲಿ ದೇವಣ್ಣ ಗೌಡರ ಮನೆಯನ್ನು ಅರಣ್ಯಾಧಿಕಾರಿಗಳು ಧ್ವಂಸಗೊಳಿಸಿದ್ದಲ್ಲದೆ, ರಬ್ಬರ್‌ ಕೃಷಿಯನ್ನು ನಾಶ ಮಾಡಿದ್ದರು. ಮರುದಿನ ಅಲ್ಲಿಗೆ ತೆರಳಿದ ಶಾಸಕ ಹರೀಶ್ ಪೂಂಜ ವಿರುದ್ಧವೇ ಅಧಿಕಾರಿಗಳು ಮಾತನಾಡಿದ್ದಾರೆ. ಅರಣ್ಯಾಧಿಕಾರಿಯ ರೈತ ವಿರೋಧಿ ನೀತಿ ಇದಾಗಿದ್ದು, ಎರಡು ದಿನಗಳ ನಂತರ ಶಾಸಕರ ವಿರುದ್ಧವೇ ಅಧಿಕಾರಿ ದೂರು ದಾಖಲಿಸಿದ್ದಾರೆ ಎಂದರು. ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಮಾತ್ರಕ್ಕೆ ಶಾಸಕರ ವಿರುದ್ಧವೇ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಶಾಸಕರಿಗೇ ಈ ಗತಿಯಾದರೆ, ಸಾಮಾನ್ಯರ ಪಾಡು ಏನು ಎಂದು ನಳಿನ್‌ ಕುಮಾರ್‌ ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ಸರ್ಕಾರ ರೈತರ, ಕೃಷಿ ಪರರ ವಿರುದ್ಧ ಕೇಸು ದಾಖಲಿಸುತ್ತಿದೆಯೇ ವಿನಃ ರಾಷ್ಟ್ರ ವಿರೋಧಿಗಳ ಮೇಲಲ್ಲ. ಇದು ರೈತರ ಪರ ಅಲ್ಲ, ರಾಷ್ಟ್ರ ವಿರೋಧಿ ಸರ್ಕಾರ ಎಂದು ನಳಿನ್‌ ಕುಮಾರ್‌ ಟೀಕಿಸಿದರು. ಆಂತರಿಕ ಜಗಳದಿಂದ ಸರ್ಕಾರ ಪತನ: ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ತಂಡ ಇದ್ದು, ಸಿದ್ದು, ಡಿಕೆಶಿ ಹಾಗೂ ಸತೀಶ್‌ ಜಾರಕಿಹೊಳಿ ತಂಡ ಸದ್ಯದಲ್ಲೇ ಪ್ರತ್ಯೇಕವಾಗಿ ಹೊರಗೆ ಬರಲಿದೆ. ಅವರೇ ಡಿನ್ನರ್‌ ಪಾರ್ಟಿ ಇರಿಸಿಕೊಂಡಿದ್ದು, ಸದ್ಯದಲ್ಲೇ ರೆಸಾರ್ಟ್‌ ರಾಜಕಾರಣ ನಡೆಸಿದರೂ ಅಚ್ಚರಿ ಇಲ್ಲ. ಕಾಂಗ್ರೆಸ್‌ ಆಡಳಿತ ಆಂತರಿಕ ಜಗಳದಿಂದಲೇ ಬಿದ್ದುಹೋಗುತ್ತದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ನನ್ನ ವಿರುದ್ಧ ಟಿಕೆಟ್‌ ಹಂಚಿಕೆಯಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತವಾದ ಆರೋಪದ ವಿರುದ್ಧ ದೂರು ನೀಡುವಂತೆ ಆಗಲೇ ಸೂಚಿಸಿದ್ದೇನೆ. ಆರೋಪಕ್ಕೆ ಒಳಗಾದವರೇ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದಿದ್ದಾರೆ. ಬೇಕಾದರೆ ತನಿಖೆ ನಡೆಸಲಿ ಎಂದರು. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಒಂದು ರು. ಕೂಡ ಬಿಡುಗಡೆ ಮಾಡಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ನಳಿನ್‌ ಕುಮಾರ್‌, ಬರಪರಿಹಾರ ಮೊತ್ತ ಬಿಡುಗಡೆಗೆ ಅದರದ್ದೇ ಆದ ಮಾನದಂಡ ಇದೆ. ಎನ್‌ಡಿಆರ್‌ಎಫ್‌ ನಿಯಮಾವಳಿಯಂತೆ ಪರಿಹಾರ ಮೊತ್ತ ನೀಡಲಾಗುತ್ತದೆ. ರಾಜ್ಯದಿಂದ ಕೇಂದ್ರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಅಲ್ಲಿ ಪರಿಹಾರ ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುತ್ತದೆ. ಬಿಜೆಪಿ ಆಡಳಿತ ಇರುವಾಗಲೇ ಕೇಂದ್ರ ಸರ್ಕಾರ ತಕ್ಷಣ ನೆರವು ಬಿಡುಗಡೆ ಮಾಡಿಲ್ಲ, ಕೇಂದ್ರ ತಂಡ ಭೇಟಿ ನೀಡಿ ಅಧ್ಯಯನ ನಡೆಸಿದ ಬಳಿಕವಷ್ಟೆ ನೀಡಿದೆ. ಸಿಎಂ ಆಗಿ ಸಿದ್ದರಾಮಯ್ಯಗೆ ಈ ವಿಚಾರ ಗೊತ್ತಿಲ್ಲವೇ, ಅನುಭವ ಕೊರತೆಯೇ ಅಥವಾ ಜಾಣ ಮರೆವೇ ಎಂದು ಪ್ರಶ್ನಿಸಿದರು. ಶಾಸಕರಾದ ಡಾ.ಭರತ್‌ ಶೆಟ್ಟಿ, ಹರೀಶ್‌ ಪೂಂಜಾ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ವಿಧಾನ ಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್‌ಸಿಂಹ ನಾಯಕ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಎಂ., ಮುಖಂಡ ಜಗದೀಶ್‌ ಶೇಣವ ಇದ್ದರು. ಬರ ಅಧ್ಯಯನಕ್ಕೆ ಬಿಜೆಪಿ 17 ತಂಡ ಪ್ರವಾಸ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ರಾಜ್ಯದಲ್ಲಿ 250 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದು ಕಡೆ ಬರ, ಇನ್ನೊಂದು ಕಡೆ ರೈತರ ಆತ್ಮಹತ್ಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿಯಿಂದ ಬರ ಪ್ರವಾಸ ಅಧ್ಯಯನ ತಂಡ ಬರಪೀಡಿತ ಜಿಲ್ಲೆಗಳಲ್ಲಿ 17 ತಂಡ ಪ್ರವಾಸ ನಡೆಸಲಿದೆ. ಈ ತಂಡ ನ.10ರೊಳಗೆ ರಾಜ್ಯ ಬಿಜೆಪಿ ಘಟಕಕ್ಕೆ ವರದಿ ಸಲ್ಲಿಸಲಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಬೆಂಗಳೂರು ಹಾಗೂ ತುಮಕೂರಿಗೆ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ತಂಡ, ಮೈಸೂರು, ಚಾಮರಾಜನಗರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಮಾಜಿ ಸಚಿವ ಸಿ.ಟಿ.ರವಿ ತಂಡ, ರಾಯಚೂರು, ಯಾದಗಿರಿಗೆ ಅರವಿಂದ ಬೆಲ್ಲದ್‌ ತಂಡ, ಬೀದರ್‌, ಕಲಬುರಗಿಗೆ ವಿಜಯೇಂದ್ರ ತಂಡ, ಬಳ್ಳಾರಿ, ಕೊಪ್ಪಳಕ್ಕೆ ಈಶ್ವರಪ್ಪ ತಂಡ, ಹಾವೇರಿ, ಗದಗಕ್ಕೆ ಶ್ರೀರಾಮುಲು ತಂಡ, ಬೆಳಗಾವಿ, ಚಿಕ್ಕೋಡಿಗೆ ಅರವಿಂದ್‌ ಲಿಂಬಾವಳಿ ತಂಡ, ವಿಜಯಪುರ, ಬಾಗಲಕೋಟೆಗೆ ನಳಿನ್‌ ಕುಮಾರ್‌ ಕಟೀಲ್‌ ತಂಡ, ಶಿವಮೊಗ್ಗ, ಉತ್ತರಕನ್ನಡಕ್ಕೆ ಸುನೀಲ್‌ ಕುಮಾರ್‌, ಉಡುಪಿ, ಚಿಕ್ಕಮಗಳೂರಿಗೆ ಅರಗ ಜ್ಞಾನೇಂದ್ರ, ದಾವಣಗೆರೆ, ಚಿತ್ರದುರ್ಗಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಗಳೂರು, ಕೊಡಗಿಗೆ ಆರ್‌.ಅಶೋಕ್‌, ಮಂಡ್ಯ, ಹಾಸನಕ್ಕೆ ಡಿ.ವಿ.ಸದಾನಂದ ಗೌಡ, ಬೆಂಗಳೂರು ಗ್ರಾಮಾಂತರ, ರಾಮನಗರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಧಾರವಾಡ, ವಿಜಯನಗರಕ್ಕೆ ಗೋವಿಂದ ಕಾರಜೋಳ ತಂಡ ಪ್ರವಾಸ ನಡೆಸಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!