ಕುಷ್ಟಗಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವಿರೋಧಿಸಿ, ಪ್ರಜಾಪ್ರಭುತ್ವ ಹಾಗೂ ಮತದಾನದ ಹಕ್ಕುಗಳ ರಕ್ಷಣೆಗೆ ಕುಷ್ಟಗಿ ಮತ್ತು ಹನುಮಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ‘ವೋಟ್ ಬಚಾವೋ, ದೇಶ ಬಚಾವೋ’ ಘೋಷವಾಕ್ಯದಡಿ ಬೃಹತ್ ಪಾದಯಾತ್ರೆ ನಡೆಸಲಾಯಿತು.
ನೀಡಶೇಸಿ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ, ಪುರಸಭೆ, ಕನಕದಾಸ ವೃತ್ತ ಹಾಗೂ ಮಾರುತಿ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ವಿರುದ್ಧವೂ ಕಾರ್ಯಕರ್ತರು ಘೋಷಣೆ ಕೂಗಿದರು. ಬಳಿಕ ಬಸವೇಶ್ವರ ವೃತ್ತದಲ್ಲಿ ಸಮಾವೇಶ ನಡೆಸಿ, ಮತದಾರರ ಹಕ್ಕುಗಳ ರಕ್ಷಣೆಗೆ ಹೋರಾಟ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು ಕುತಂತ್ರ ನಡೆಸುತ್ತಿದೆ ಎಸ್ಐಆರ್ ಪ್ರಕ್ರಿಯೆ ಮೂಲಕ ಕಾಂಗ್ರೆಸ್ ಬೆಂಬಲಿಗರು, ಅಲ್ಪಸಂಖ್ಯಾತರು ಹಾಗೂ ಬಡವರ ಮತಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವಿದೆ. ಮತದಾನದ ಹಕ್ಕು ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರ. ಈ ಹಕ್ಕನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮತದಾರರ ಹಕ್ಕುಗಳ ರಕ್ಷಣೆಗಾಗಿ ದೇಶಾದ್ಯಂತ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಹಲವು ಆಕ್ಷೇಪಗಳಿವೆ. ಯಲಬುರ್ಗಾ ಕ್ಷೇತ್ರದಲ್ಲಿ 842 ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿರುವ ಕುರಿತು ಪ್ರಶ್ನೆಗಳಿವೆ. ಕುಷ್ಟಗಿ ಕ್ಷೇತ್ರದಲ್ಲಿಯೂ 27 ಮತಗಳ್ಳತನ ನಡೆದಿದ್ದು ಮತದಾರರ ಪಟ್ಟಿ ಪರಿಶೀಲನೆ ನಡೆದಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದರು.
ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಕಾಂಗ್ರೆಸ್ಗೆ ಯಾವುದೇ ದುರುದ್ದೇಶವಿಲ್ಲ. ಸಂವಿಧಾನಬದ್ಧವಾಗಿ ದೇಶ ನಡೆಯಬೇಕು ಹಾಗೂ ಎಲ್ಲ ಜಾತಿ, ಧರ್ಮಗಳ ಮತದಾರರ ಹಕ್ಕುಗಳು ಸುರಕ್ಷಿತವಾಗಿರಬೇಕು ಎಂಬುದೇ ಹೋರಾಟದ ಉದ್ದೇಶವಾಗಿದೆ. ಮತದಾರರ ಹಕ್ಕುಗಳ ರಕ್ಷಣೆಗಾಗಿ ಗ್ರಾಮದಿಂದ ದೆಹಲಿ ವರೆಗೆ ಹೋರಾಟ ನಡೆಸಲಾಗುವುದು. ಮತಗಳ್ಳತನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಕುಷ್ಟಗಿ ಬ್ಲಾಕ್ ಅಧ್ಯಕ್ಷ ಮಾನಪ್ಪ ತಳವಾರ, ಹನುಮಸಾಗರ ಬ್ಲಾಕ್ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ್, ಲಾಡ್ಲೇಮಷಾಕ್ ದೋಟಿಹಾಳ, ದೊಡ್ಡಬಸವನಗೌಡ ಬಯ್ಯಾಪುರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಫಾರೂಕ ಡಾಲಾಯತ್, ಮೈನುದ್ದೀನ್ ಮುಲ್ಲಾ, ಚಂದ್ರಶೇಖರ ನಾಲತವಾಡ, ಉಮೇಶ ಮಂಗಳೂರ ಪಾಲ್ಗೊಂಡಿದ್ದರು.