ಹೆದ್ದಾರಿ ಗುಂಡಿ ವಿರೋಧಿಸಿ ಇಂದು ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Sep 12, 2025, 12:06 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಹರೀಶ್‌ ಕುಮಾರ್‌. | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯ ಗುಂಡಿ ಮುಚ್ಚಿ ಸಂಚಾರ ಯೋಗ್ಯಗೊಳಿಸುವಂತೆ ಆಗ್ರಹಿಸಿ ಸೆ.12ರಂದು ಬೆಳಗ್ಗೆ 10 ಗಂಟೆಗೆ ನಗರದ ನಂತೂರು ಜಂಕ್ಷನ್‌ನಲ್ಲಿ ಕಾಂಗ್ರೆಸ್ ಬೃಹತ್‌ ಪ್ರತಿಭಟನೆ ಆಯೋಜಿಸಿದೆ.

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಗುಂಡಿಗೆ ಬಿದ್ದು ಸ್ಕೂಟರ್‌ ಸವಾರೆ ಸಾವಿಗೀಡಾದ ಪ್ರಕರಣದ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್‌ ಹೋರಾಟಕ್ಕೆ ಇಳಿದಿದೆ. ರಾಷ್ಟ್ರೀಯ ಹೆದ್ದಾರಿಯ ಗುಂಡಿ ಮುಚ್ಚಿ ಸಂಚಾರ ಯೋಗ್ಯಗೊಳಿಸುವಂತೆ ಆಗ್ರಹಿಸಿ ಸೆ.12ರಂದು ಬೆಳಗ್ಗೆ 10 ಗಂಟೆಗೆ ನಗರದ ನಂತೂರು ಜಂಕ್ಷನ್‌ನಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಎಂಎಲ್ಸಿ ಹರೀಶ್‌ ಕುಮಾರ್‌, ಬೆಳಗ್ಗೆ 10 ಗಂಟೆಗೆ ನಂತೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿ, ಅಲ್ಲಿಂದ ಪಾದಯಾತ್ರೆ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿವರೆಗೆ ಮೆರ‍ವಣಿಗೆ ನಡೆಸಲಾಗುವುದು ಎಂದರು.

ಧ್ವನಿವರ್ಧಕ- ಅಂದು ಆಕ್ಷೇಪ ಏಕಿಲ್ಲ?:

ರಾತ್ರಿ 10.30ರ ಬಳಿಕ ಧ್ವನಿವರ್ಧಕ ಬಳಕೆ ನಿಷೇಧ ಮಾಡಿ ಕಾನೂನು ರೂಪಿಸಿದ್ದೇ ಬಿಜೆಪಿಯ ಬೊಮ್ಮಾಯಿ ಸರ್ಕಾರ. ಆಝಾನ್‌ ನಿಲ್ಲಿಸುವ ಏಕೈಕ ಉದ್ದೇಶದಿಂದ ಕಾನೂನು ಮಾಡಿದ್ದು, ಅದೇ ಕಾನೂನು ಎಲ್ಲದಕ್ಕೂ ಅನ್ವಯಿಸಿದೆ. ಈಗ ಧ್ವನಿವರ್ಧಕಕ್ಕೆ ಅವಕಾಶ ಕೇಳುವ ಬಿಜೆಪಿ ಶಾಸಕರು ಅಂದು ಕಾನೂನು ಮಾಡುವಾಗಲೂ ಶಾಸಕರಾಗಿದ್ದರು. ಆಗಲೇ ಅವರು ಏಕೆ ಆಕ್ಷೇಪ ಮಾಡಿಲ್ಲ ಎಂದು ಪ್ರಶ್ನಿಸಿದರು.

ಡಿಜೆಗೆ ಅವಕಾಶವೇ ಬೇಡ:

ಭಾರೀ ಶಬ್ದ ಮಾಲಿನ್ಯ ಉಂಟುಮಾಡುವ ಡೀಜೆಗೆ ಅವಕಾಶ ನೀಡಲೇಬಾರದು ಎಂದು ಘಂಟಾಘೋಷವಾಗಿ ಹೇಳುತ್ತೇವೆ. ಡೀಜೆ ಶಬ್ದದ ಕಾರಣದಿಂದಲೇ ಅನೇಕ ಯುವಕರು ಸಾವಿಗೀಡಾಗಿದ್ದಾರೆ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತವೆ ಎಂದರು.

ಸರಣಿ ಕೊಲೆಗಳಂಥ ಕಪ್ಪು ಚುಕ್ಕೆಯ ಘಟನೆಗಳು ನಡೆದ ಬಳಿಕ ಜಿಲ್ಲೆಯಲ್ಲಿ ಬಿಗಿ ಕಾನೂನು ಸುವ್ಯವಸ್ಥೆ ಜಾರಿಗೊಳಿಸಿದ್ದರಿಂದ ಶಾಂತಿಯ ವಾತಾವರಣ ನೆಲೆಸಿದೆ. ಧರ್ಮದ ಹೆಸರಿನಲ್ಲಿ ಓಟ್‌ ಬ್ಯಾಂಕ್‌ಗಾಗಿ ದ್ವೇಷ ಭಾಷಣ ಮಾಡುವವರೇ ಹೊರತು ದೇಶ ರಕ್ಷಣೆಗಾಗಿ ಅಲ್ಲ ಎಂದು ಟೀಕಿಸಿದರು.

ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಪ್ಪಿ, ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್‌ ಹಮೀದ್‌, ಸುರೇಂದ್ರ ಕಂಬಳಿ, ನೀರಜ್‌ಪಾಲ್‌, ವಿಕಾಸ್‌ ಶೆಟ್ಟಿ, ಶಬೀರ್‌ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿನ ಅಂಕು-ಡೊಂಕು ತಿದ್ದಲು ಶಿಕ್ಷಣವಂತರಾಗಿ
ಕುವೆಂಪು ಕರ್ನಾಟಕದ ಅಮೂಲ್ಯ ಆಸ್ತಿ