ತಾಲೂಕಿನ ತಣ್ಣೀರುಹಳ್ಳ ಗ್ರಾಮದ ಕಾಂಗ್ರೆಸ್ ಪಕ್ಷದ ವತಿಯಿಂದ ಜನ ಸಂದರ್ಶನ ಕಾರ್ಯಕ್ರಮ ಈಚೆಗೆ ಗ್ರಾಮದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕಿನ ತಣ್ಣೀರುಹಳ್ಳ ಗ್ರಾಮದ ಕಾಂಗ್ರೆಸ್ ಪಕ್ಷದ ವತಿಯಿಂದ ಜನ ಸಂದರ್ಶನ ಕಾರ್ಯಕ್ರಮ ಈಚೆಗೆ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ತಣ್ಣೀರು ಹಳ್ಳ ಗ್ರಾಮದ ಅಭಿವೃದ್ಧಿಗೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ಗ್ರಾಮದಲ್ಲಿನ ಮನೆ ಹಕ್ಕುಪತ್ರದ ಬಗ್ಗೆ ತಹಸೀಲ್ದಾರ್ ಜೊತೆ ಚರ್ಚಿಸಿ, ವಿಶೇಷ ತಂಡ ರಚನೆ ಮಾಡಿ ಸಮಸ್ಯೆ ಬಗೆಹರಿಸಲು ಗಮನ ಹರಿಸಲಾಗುವುದು. ಅಪಾಯದ ಸ್ಥಿತಿಯಲ್ಲಿರುವ ಮನೆಗಳನ್ನು ಗುರುತಿಸಿ ತಡೆಗೋಡೆ ಕಾಮಗಾರಿ ಮಾಡುವ ಭರವಸೆ ನೀಡಿದರು. ಅಲ್ಲದೆ ಗ್ರಾಮದ ಸಮುದಾಯ ಭವನದ ಅಡುಗೆ ಮನೆ ಹಾಗೂ ವಿವಿಧ ಕಾಮಗಾರಿಯ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು. ಅಬ್ಬೂರುಕಟ್ಟೆ ಗ್ರಾಮದ ಎಸ್.ಎಂ. ಡಿಸಿಲ್ವ ಗ್ರಾಮದ ಕುಂದು ಕೊರತೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಸ್ಥಳೀಯ ಗ್ರಾಮಸ್ಥರು ಕಳೆದ ಮೂರು ತಲೆಮಾರುಗಳಿಂದ ಈ ಗ್ರಾಮದಲ್ಲಿ ವಾಸವಿದ್ದೇವೆ. ನಾವುಗಳು ವಾಸವಿರುವ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ. ನಾವು ವಾಸ ಮಾಡುತ್ತಿರುವ ಮನೆಗೆ ಯಾವುದೇ ದಾಖಲಾತಿ ಇರುವುದಿಲ್ಲ. ಇಲ್ಲಿನ ಎಲ್ಲರಿಗೂ ಹಕ್ಕು ಪತ್ರ ನೀಡುವ ಕೆಲಸವಾಗಬೇಕು ಎಂದು ಮನವಿ ಮಾಡಿದರು. ಅಲ್ಲದೆ ನಮ್ಮ ಗ್ರಾಮದ ಅನೇಕ ಮನೆಗಳು ಗುಡ್ಡದ ಪ್ರದೇಶದಲ್ಲಿದ್ದು, ಮನೆಗಳು ಕುಸಿಯುವ ಹಂತದಲ್ಲಿವೆ. ಮಳೆಗಾಲದಲ್ಲಿ ಬರೆ ಕುಸಿತವಾಗುತ್ತಿದ್ದು, ಅಪಾಯ ಎದುರಾಗಿದೆ. ಆದ್ದರಿಂದ ತಡೆಗೋಡೆ ನಿರ್ಮಿಸಿ ಕೊಡಬೇಕೆಂದು ತಿಳಿಸಿದರು. ಗ್ರಾಮದ ಎಂ.ಸಿ. ದರ್ಶನ್ ಮಾತನಾಡಿ, ನಮ್ಮ ತಂದೆಯವರು ಲೈನ್ ಮನೆಯಲ್ಲಿ ವಾಸಿಸಿ ಈಗ ನಾವು ಕೂಡ ಅದೇ ಲೈನ್ ಮನೆಯಲ್ಲಿಯೇ ವಾಸಿಸುತ್ತಿದ್ದೇವೆ. ನಮಗೆ ಆಶ್ರಯ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡಬೇಕು. ತಣ್ಣೀರುಹಳ್ಳದಿಂದ ವಳಗುಂದ ಗ್ರಾಮಕ್ಕೆ ತೆರಳುವ ರಸ್ತೆ ತೀವ್ರ ಹದಗೆಟ್ಟಿದ್ದು ಸರಿಪಡಿಸಿಕೊಡಬೇಕೆಂದರು. ಗ್ರಾಮದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಕ್ಕೆ ೧೫ ವರ್ಷ ಕಳೆದರೂ ಇನ್ನೂ ಉದ್ಘಾಟನೆಯಾಗಿಲ್ಲ. ಭವನದ ಅಭಿವೃದ್ಧಿ ಮಾಡಬೇಕು ಎಂದು ಶಾಸಕರಲ್ಲಿ ಸಮುದಾಯ ಭವನದ ಅಧ್ಯಕ್ಷ ಪ್ರವೀಣ್ ಅವರು ಅರ್ಜಿ ಮೂಲಕ ಮನವಿ ಮಾಡಿದರು . ಸಭೆಯ ಅಧ್ಯಕ್ಷತೆಯನ್ನು ಬೂತ್ ಅಧ್ಯಕ್ಷ ಟಿ.ಬಿ. ಹರೀಶ್ ವಹಿಸಿದ್ದರು. ಈ ಸಂದರ್ಭ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಕಿರಣ್ ಉದಯಶಂಕರ್, ಗ್ರಾಪಂ ಸದಸ್ಯರಾದ ಪ್ರವೀಣ್, ಅಶ್ವಿನಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಲಾರೆನ್ಸ್, ಬೂತ್ ಉಪಾಧ್ಯಕ್ಷ ರಫೀಕ್, ಕಾರ್ಯದರ್ಶಿ ಆನಂದ್ ರಾಜ್, ಸೋಹನ್ ಡಿಸಿಲ್ವಾ, ವಲಯ ಅಧ್ಯಕ್ಷ ಲೋಕೇಶ್, ವಲಯ ಪ್ರಚಾರ ಸಮಿತಿ ಅಧ್ಯಕ್ಷ ದಿವಾಕರ್ ಮತ್ತು ಗ್ರಾಮಸ್ಥರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.