ನಗರದ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವ ಪ್ರಯುಕ್ತ ನಡೆದ ‘ಶಕ್ತಿ’ ಮಹಿಳಾ ಸಬಲೀಕರಣ ವಿಚಾರ ಸಂಕಿರಣ
ಮಂಗಳೂರು: ಯುವತಿಯರು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಉದ್ಯಮದ ಕಡೆಗೆ ಮುಖ ಮಾಡಬೇಕಾದ ಅಗತ್ಯವಿದೆ. ಮಹಿಳೆಯರಲ್ಲಿ ಅಂತರ್ಗತ ಕೌಶಲ್ಯವಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಪ್ರತಿಯೊಬ್ಬರು ಗಮನ ಹರಿಸಬೇಕು ಎಂದು ಜೆ.ವಿ. ಗ್ರೂಪ್ ಆಫ್ ಕಂಪನೀಸ್ ನಿರ್ದೇಶಕಿ ಆತ್ಮಿಕಾ ಅಮಿನ್ ಸಲಹೆ ನೀಡಿದ್ದಾರೆ.
ನಗರದ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವ ಪ್ರಯುಕ್ತ ನಡೆದ ‘ಶಕ್ತಿ’ ಮಹಿಳಾ ಸಬಲೀಕರಣ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಜೀವನದಲ್ಲಿ ಹಲವಾರು ಅವಕಾಶಗಳು ದೊರೆಯುತ್ತವೆ, ಅವುಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಉದ್ಯಮಶೀಲತೆ ಎಂದರೆ ಸೋಲುಗಳನ್ನು ಸ್ವೀಕರಿಸಿ ಮುಂದುವರಿಯುವುದು. ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ನಾವು ಉನ್ನತ ಸ್ಥಾನಕ್ಕೇರಬೇಕಾದರೆ ಗುರಿ ತಲುಪುವ ಬಲವಾದ ಆತ್ಮಸ್ಥೈರ್ಯ ಇರಬೇಕು ಎಂದು ಹೇಳಿದರು.ಮಂಗಳಾ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಅನಿತಾ ಜಿ. ಭಟ್ ಮಾತನಾಡಿ, ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ. 50ರಷ್ಟು ಮಹಿಳೆಯರಿದ್ದಾರೆ. ಎಲ್ಲಿಯವರೆಗೆ ಮಹಿಳಾ ಸಬಲೀಕರಣವಾಗುವುದಿಲ್ಲವೋ, ಅಲ್ಲಿವರೆಗೆ ದೇಶದ ಸಬಲೀಕರಣ ಸಾಧ್ಯವಿಲ್ಲ. ಮಹಿಳಾ ಸಬಲೀಕರಣವಾದಾಗ ಮಾತ್ರ ರಾಷ್ಟ್ರದ ಬೆಳವಣಿಗೆ ಸಾಧ್ಯ. ಇಂದಿನ ಯುವ ಜನಾಂಗ ಕೌಶಲ್ಯಯುತರಾಗುವುದರೊಂದಿಗೆ ಉನ್ನತ ಮೌಲ್ಯಗಳನ್ನು ತಮ್ಮದಾಗಿಸಬೇಕು ಎಂದು ಅಭಿಪ್ರಾಯಪಟ್ಟರು. ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕ ಸ್ವಾಮಿ ಜ್ಞಾನೀಶಾನಂದಜಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ವಿಶೇಷ ಗೋಷ್ಠಿಗಳು ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ನೀರುಮಾರ್ಗದ ಮಂಗಳಾ ಸಮೂಹ ಸಂಸ್ಥೆಗಳು ಹಾಗೂ ಕುಡುಪು ತೇಜಸ್ವಿನಿ ಕಾಲೇಜ್ ಆಫ್ ನರ್ಸಿಂಗ್‌ನ 600ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಮಂಗಳೂರು ರಾಮಕೃಷ್ಣ ಮಿಷನ್ ಸ್ವಯಂಸೇವಕ ರಂಜನ್ ಬೆಳ್ಳರ್ಪ್ಪಾಡಿ ಸ್ವಾಗತಿಸಿದರು. ಮಂಗಳಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲೆ ಪ್ರೊ. ಪ್ರತಿಜ್ಞಾ ಸುಹಾಸಿನಿ ವಂದಿಸಿದರು. ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಶರಣ್ಯ ಯು. ಆರ್. ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.