ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಡಿಜಿಟಲ್ ಮೌಲ್ಯಮಾಪನ ಅಳವಡಿಸಿಕೊಳ್ಳಲು ಮುಂದಾಗಿದ್ದು, ಮುಂದಿನ ಸೆಮಿಸ್ಟರ್‌ನಲ್ಲಿ ಇದು ಜಾರಿಯಾಗಲಿದೆ. ಇದು ಮೊದಲ ಹಂತದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಮುದ್ರಿತ ಸಮಗ್ರ ಅಂಕಪಟ್ಟಿ ನೀಡುವ ಬಗ್ಗೆ ವಿವಿ ನಿರ್ಧಾರ ಕೈಗೊಂಡಿದೆ. ಈಗಾಗಲೇ ಪದವಿ ಹಂತದಲ್ಲಿ 17,500 ಅಂಕಪಟ್ಟಿಗಳನ್ನು ಮುದ್ರಿಸಿ ಆಯಾ ಕಾಲೇಜುಗಳಿಗೆ ತಲುಪಿಸಲಾಗಿದೆ. ಪಿಜಿ ವಿದ್ಯಾರ್ಥಿಗಳ ಅಂಕಪಟ್ಟಿ ಮುದ್ರಣ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು. ವಿವಿ ಅಡಿಯಲ್ಲಿ ಬರುವ 131 ಕಾಲೇಜುಗಳು ಮುಂದುವರಿಕೆ ಸಂಯೋಜನೆ, 21 ಕಾಲೇಜುಗಳು ವಿಸ್ತರಣಾ ಸಂಯೋಜನೆ, 28 ಕಾಲೇಜುಗಳು ಶಾಶ್ವತ ಸಂಯೋಜನೆ ಮುಂದುವರಿಕೆ, 11 ಕಾಲೇಜುಗಳು ಹೊಸ ಶಾಶ್ವತ ಸಂಯೋಜನೆಗೆ 2026–27ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದವು. ಕಾರ್ಕಳ ವೆಂಕಟರಮಣ ಮಹಿಳಾ ಕಾಲೇಜಿನ ಹೆಸರನ್ನು ಶ್ರೀ ವೆಂಕಟರಮಣ ಫಸ್ಟ್ ಗ್ರೇಡ್ ಕಾಲೇಜು ಎಂದು ಬದಲಾಯಿಸಲು, ಕಾರ್ಕಳ ಶಿರ್ಡಿ ಸಾಯಿ ಡಿಗ್ರಿ ಕಾಲೇಜಿನ ಹೆಸರನ್ನು ಎಕ್ಸಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜು ಎಂದು ಹೆಸರು ಬದಲಾಯಿಸಲು ಹಾಗೂ ಒಂದು ಕಾಲೇಜಿನಿಂದ ಸ್ಥಳ ಬದಲಾವಣೆಗೆ ಅರ್ಜಿ ಸಲ್ಲಿಕೆಯಾಗಿದ್ದು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ನೇತ್ರ ಜ್ಯೋತಿ ಕಾಲೇಜು ಉಡುಪಿ, ಮಂಗಳಾ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸಸ್ ಪೆದಮಲೆ, ಮಂಗಳೂರು, ಅಡ್ಯಾರ್ ಇಂಟಲೆಕ್ಚುವಲ್ಸ್ ಕಾಲೇಜು ಅಡ್ಯಾರ್, ಶ್ಯಾಮ್ ಇನ್‌ಸ್ಟಿಟ್ಯೂಟ್ ಕುಂಟಿಕಾನ, ಮಂಗಳೂರು ಹಾಗೂ ಪ್ರೆಸ್ಟೀಜ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇನ್ನೊವೇಷನ್ ಜೆಪ್ಪಿನಮೊಗರು ಈ ಐದು ಕಾಲೇಜುಗಳು ವಿವಿ ಸಂಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದವು. ಇವುಗಳಲ್ಲಿ ಪ್ರೆಸ್ಟೀಜ್ ಪ್ರೆಸ್ಟೀಜ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇನ್ನೊವೇಷನ್ ಕಾಲೇಜುಗಳ ಅರ್ಜಿ ತಿರಸ್ಕರಿಸಲು ನಿರ್ಧರಿಸಲಾಯಿತು.
ನಿಯಮ ಪಾಲನೆಯಲ್ಲಿ ರಾಜಿ ಇಲ್ಲ: ವಿಸ್ತರಣಾ ಸಂಯೋಜನೆ, ಹೊಸ ಸಂಯೋಜನೆ, ಶಾಶ್ವತ ಸಂಯೋಜನೆ ಮುಂದುವರಿಕೆ, ಹೊಸ ಶಾಶ್ವತ ಸಂಯೋಜನೆಗೆ ಅರ್ಜಿ ಸಲ್ಲಿಸಿರುವ ಕಾಲೇಜುಗಳು ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಭೂ ದಾಖಲೆ ಸೇರಿದಂತೆ ಅಗತ್ಯ ಸರ್ಕಾರದ ಆದೇಶ ಹೊರಡಿಸಿದೆ. ಈ ಕಾರಣಕ್ಕೆ ಸರಿಯಾದ ದಾಖಲೆಗಳು ಇಲ್ಲದಿರುವ ಕಾಲೇಜುಗಳ ಪ್ರಸ್ತಾವವನ್ನು ವಿವಿ ಹಂತದಲ್ಲಿಯೇ ತಿರಸ್ಕರಿಸಲಾಗುತ್ತದೆ. ವಿವಿ ಅಡಿಯಲ್ಲಿ ಹಿಂದೆ ಒಟ್ಟು 204 ಕಾಲೇಜುಗಳು ಇದ್ದವು. ಇದು 156ಕ್ಕೆ ಇಳಿಕೆಯಾಗಿದ್ದು, ಪ್ರಸ್ತುತ ಹೊಸ ನಾಲ್ಕು ಕಾಲೇಜುಗಳು ಸೇರಿ ಒಟ್ಟು 160 ಕಾಲೇಜುಗಳು ಆಗಿವೆ. ಕಾಲೇಜುಗಳ ಸಂಖ್ಯೆ ಕಡಿಮೆ ಇದ್ದರೂ, ನಿಯಮ ಪಾಲನೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕುಲಪತಿ ಪ್ರೊ. ಧರ್ಮ ಹೇಳಿದರು.ಮಂಗಳೂರು ವಿವಿಯಲ್ಲಿ ಹಸಿರು ಹೆಚ್ಚಿಸುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಕಳೆದ ಒಂಬತ್ತು ತಿಂಗಳುಗಳಲ್ಲಿ 600ಕ್ಕೂ ಅಧಿಕ ಮಾವು, ಹಲಸು, ಚಿಕ್ಕು ಸೇರಿದಂತೆ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಅಮ್ಮನ ಹೆಸರಿನಲ್ಲಿ ಹಾಗೂ ವಿದ್ಯಾರ್ಥಿಗಳ ಜನ್ಮದಿನದಂದು ಗಿಡ ನೆಡುವ ಯೋಜನೆ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ನೆಟ್ಟಿರುವ ಗಿಡಗಳನ್ನು ಅವರೇ ನಿರ್ವಹಣೆ ಮಾಡುವಂತೆ, ಮುಂದೆ ಬರುವ ಹೊಸ ವಿದ್ಯಾರ್ಥಿಗಳು ಅವುಗಳನ್ನು ಪೋಷಿಸುವಂತೆ ಸೂಚಿಸಲಾಗಿದೆ ಎಂದು ಪ್ರೊ. ಧರ್ಮ ಹೇಳಿದರು. ಸರ್ಕಾರ ಸೂಚಿಸಿದ ಸುರಕ್ಷಾ ಮಾನದಂಡಗಳನ್ನು ಎಲ್ಲ ಕಾಲೇಜುಗಳು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಸೌಲಭ್ಯ ಹೊಂದಲು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಲು ಜನವರಿ ತಿಂಗಳ ಅಂತ್ಯದವರೆಗೆ ಅವಕಾಶ ನೀಡಲಾಗುವುದು ಎಂದು ಕುಲಪತಿ ತಿಳಿಸಿದರು.ಸರ್ಕಾರಕ್ಕೆ ಮತ್ತೊಮ್ಮೆ ಪತ್ರ
ವಿವಿ ಆವರಣದಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣದ ಗುತ್ತಿಗೆದಾರ ಬಿಲ್ ಪಾವತಿಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಹೂಡಿರುವ ದಾವೆಗೆ ಸಂಬಂಧಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಲಪತಿ, ನ್ಯಾಯಾಲಯದ ತೀರ್ಪಿನಲ್ಲಿ ನಮಗೆ ಹಿನ್ನಡೆಯಾಗಿದ್ದು, ತೀರ್ಪಿನ ಪ್ರತಿ ದೊರೆತ ಮೇಲೆ ಕೂಲಂಕಷ ಅಧ್ಯಯನ ಮಾಡಬೇಕಾಗಿದೆ. ಸರ್ಕಾರಕ್ಕೆ ಮತ್ತೊಮ್ಮೆ ಪತ್ರ ಬರೆದು ವಿನಂತಿಸಲಾಗುವುದು ಎಂದರು.