ಕಾಂಗ್ರೆಸ್‌ನದ್ದು ಸುಳ್ಳು ಗ್ಯಾರಂಟಿಗಳ ಸರ್ಕಾರ: ಚನ್ನಬಸವನಗೌಡ

KannadaprabhaNewsNetwork |  
Published : Feb 12, 2024, 01:33 AM IST
11ಎಚ್‌ಪಿಟಿ2- ಹೊಸಪೇಟೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಮಿತಿ ಸಭೆಯನ್ನು ಉದ್ಘಾಟಿಸಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿದರು.  | Kannada Prabha

ಸಾರಾಂಶ

ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಬರುವ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಮಹಾ ಘಟಬಂಧನದ ಅಜೆಂಡಾವನ್ನು ವಿಫಲಗೊಳಿಸಿ ಮೋದಿಜಿ ಅವರ ಕೈಬಲಪಡಿಸೋಣ ಎಂದು ಚನ್ದನಬಸವನಗೌಡ ಪಾಟೀಲ ತಿಳಿಸಿದರು.

ಹೊಸಪೇಟೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲೇ ಸರ್ಕಾರದ ಅಸಲಿ ಬಣ್ಣ ಬಯಲಾಗಿದೆ. ಸುಳ್ಳು ಗ್ಯಾರಂಟಿಗಳನ್ನು ಜನರಿಗೆ ನೀಡಿ ರಾಜ್ಯವನ್ನು ಬಡತನದತ್ತ ತಳ್ಳುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹರಿಹಾಯ್ದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಂಪಿ ಉತ್ಸವ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಅವರನ್ನು ಜಿಲ್ಲೆಯಿಂದ ತೊಲಗಿಸಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್‌ ಶೇಕ್‌ ಹೇಳಿದ್ದಾರೆ. ಈ ಸರ್ಕಾರ ಅಥವಾ ಸಿಎಂಗೆ ಮಾನ ಮರ್ಯಾದೆ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ಸಚಿವ ಜಮೀರ್ ಕಲೆಕ್ಷನ್‌ಗಾಗಿ ಪ್ರತಿ ಇಲಾಖೆಯಲ್ಲೂ ಏಜೆಂಟ್‌ಗಳನ್ನು ಇಟ್ಟಿದ್ದಾರೆ ಎಂದು ಕಾಂಗ್ರೆಸ್‌ನವರೆ ಆರೋಪಿಸುತ್ತಿದ್ದಾರೆ. ಅದನ್ನೆಲ್ಲವನ್ನು ಇಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸೋಣ ಎಂದು ಕೋರಿದರು.

ಬರುವ ಲೋಕಸಭಾ ಚುನಾವಣೆ ನಮಗೆಲ್ಲ ಈಗಿರುವ ಟಾಸ್ಕ್. ಅದನ್ನು ಸಮರ್ಥವಾಗಿ ನಿರ್ವಹಿಸಿ ಪಕ್ಷವನ್ನು ಗೆಲ್ಲಿಸೋಣ. ಸದಸ್ಯತ್ವ ಅಭಿಯಾನ ಸೇರಿ ಅನೇಕ ಕಾರ್ಯಗಳನ್ನು ಈಗಾಗಲೇ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಬರುವ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಮಹಾ ಘಟಬಂಧನದ ಅಜೆಂಡಾವನ್ನು ವಿಫಲಗೊಳಿಸಿ ಮೋದಿಜಿ ಅವರ ಕೈಬಲಪಡಿಸೋಣ ಎಂದರು.

ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಮಾತನಾಡಿ, ಲೋಕಸಭಾ ಚುನಾವಣೆ ನಿಮಿತ್ತ ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದೆ. ಪ್ರತಿಯೊಬ್ಬರಿಗೂ ಒಂದು ಮಂಡಲದ ಜವಾಬ್ದಾರಿ ನೀಡಲಾಗುತ್ತದೆ. ಅವರೆಲ್ಲ ಮಂಡಲದಲ್ಲಿ ಪ್ರವಾಸ ಮಾಡಿ ಮಂಡಲ ಅಧ್ಯಕ್ಷರಿಗೆ ವರದಿ ಸಲ್ಲಿಸುತ್ತಾರೆ. ನಮ್ಮ ಸಮಿತಿ ಕೇವಲ ಸಲಹೆಗಳನ್ನು ಮಾತ್ರ ನೀಡಲಿದೆ. ಉಳಿದಿದ್ದೆಲ್ಲ ಜಿಲ್ಲಾಧ್ಯಕ್ಷರು ಕಾರ್ಯಗತಗೊಳಿಸುತ್ತಾರೆ ಎಂದರು.

ದೇಶದಲ್ಲಿ ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗುವುದನ್ನು ನಾವೆಲ್ಲ ಸೇರಿ ಮಾಡಬೇಕಿದೆ. ಅಂತಹ ಮಹಾನ್ ವ್ಯಕ್ತಿ ಮತ್ತೆ ಪ್ರಧಾನಿ ಆಗೇ ಆಗುತ್ತಾರೆ. ಪಕ್ಷದ ಅಭ್ಯರ್ಥಿ ಯಾರೇ ಆದರೂ ಪಕ್ಷ ಗೆಲ್ಲಿಸುವತ್ತ ನಾವುಗಳು ಗಮನ ಕೇಂದ್ರಿಕರಿಸಬೇಕು. ಯಾವುದೇ ವ್ಯಕ್ತಿ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಮೋದಿಯವರ ಕೈ ಬಲಪಡಿಸಲು ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವಂತೆ ಮಾಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಎಸ್‌ಟಿ‌ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ನನ್ನನ್ನು ಗುರುತಿಸಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಪಕ್ಷಕ್ಕೆ ಋಣಿಯಾಗಿರುವೆ. ಮೋದಿ ಇಡೀ ದೇಶದ ಆರಾಧ್ಯ ದೈವ. ಆಗದಿರುವ ಕೆಲಸಗಳನ್ನು ಮಾಡಿ ತೋರಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಮಾತನಾಡಿ, ನಾವು ಶಾಸಕರಾಗಿ ಎಂಟು ತಿಂಗಳಾಯಿತು. ಇದುವರೆಗೂ ಒಂದೇ ಒಂದು ರುಪಾಯಿ ಅನುದಾನ ಈ ಸರ್ಕಾರದಿಂದ ಬಂದಿಲ್ಲ. ಈ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಮಾಡಿದ ದೊಡ್ಡ ಎಡವಟ್ಟುಗಳಿಂದಾಗಿ ಹಣಕಾಸಿನ ಕೊರತೆ ಉಂಟಾಗಿದೆ. ಅನುದಾನ ಹಂಚಿಕೆಯ ಕುರಿತು ಇಲಾಖೆಗಳ ಅಧಿಕಾರಿಗಳನ್ನು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಕೇವಲ ಘೋಷಣೆ ಮಾಡುತ್ತಾರೆ, ಆದರೆ ಆರ್ಥಿಕ‌‌ ಇಲಾಖೆಯಿಂದ ಒಂದೇ ಒಂದು ಕಡತಕ್ಕೆ ಅನುಮೋದನೆ ಸಿಗುತ್ತಿಲ್ಲ. ಇದೇ ಈ ಸರ್ಕಾರದ ದೊಡ್ಡ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೆ ಅಸಮಾಧಾನ ಹೊಂದಿದ್ದಾರೆ. ಈ ಸರ್ಕಾರದಿಂದ ಬಿಜೆಪಿ ಶಾಸಕರಿಗಷ್ಟೇ ಅಲ್ಲ, ಕಾಂಗ್ರೆಸ್ ಶಾಸಕರಿಗೂ ಒಂದೇ ಒಂದು ಪೈಸೆ ಅನುದಾನವನ್ನು ನೀಡಿಲ್ಲ. ಇದು ಅಭಿವೃದ್ಧಿ ಕುಂಠಿತಗೊಳಿಸುವ ಕೆಲಸ. ಗ್ಯಾರಂಟಿ ನೀಡಿದ ಕಾರಣ ಅದೇ ಗುಂಗಿನಲ್ಲಿ ಕಾಂಗ್ರೆಸ್‌ನವರು ಇದ್ದಾರೆ. ಆದರೆ ಜನರು ಹಾಗೂ ಕಾಂಗ್ರೆಸ್ ಪ್ರಮುಖರ ಮನದಲ್ಲೂ ಕೇಂದ್ರದಲ್ಲಿ ಬಿಜೆಪಿ ಗೆಲ್ಲಿಸುವ ಬಯಕೆ ಇದೆ. ಕೇಂದ್ರದಲ್ಲಿ ಮೂರನೆ ಬಾರಿಗೆ ಮೋದಿಜಿ ಪ್ರಧಾನಿಯಾಗುವುದ ಶತಃಸಿದ್ಧ. ಆ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ಮಾಡೋಣ ಎಂದರು.

ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಬಲ್ಲಾಹುಣ್ಸಿ ರಾಮಣ್ಣ, ಸಂಜೀವರೆಡ್ಡಿ, ಜಿಲ್ಲಾ ವಕ್ತಾರ ಅಶೋಕ ಜೀರೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆರುಂಡಿ ಸುವರ್ಣಾ, ಜಿಲ್ಲಾ ಮಾಧ್ಯಮ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಸಹ ಸಂಚಾಲಕಿ ಅನುರಾಧ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಿರಾಜ್ ಬಾವಿಹಳ್ಳಿ, ಮುಖಂಡರಾದ ಸಾಲಿ ಸಿದ್ದಯ್ಯಸ್ವಾಮಿ, ಭಾರತಿ ಪಾಟೀಲ್, ಶಿವಶಂಕರ್, ಮಂಡಲಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಜಿಲ್ಲಾ ಹಾಗೂ ಮಂಡಲಗಳ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ