ಬಡ ಜನರ ಬದುಕಿನ ಬಗ್ಗೆ ಚಿಂತಿಸುವ ಪಕ್ಷ ಕಾಂಗ್ರೆಸ್: ಶಾಸಕ ಎಚ್‌.ಡಿ. ತಮ್ಮಯ್ಯ

KannadaprabhaNewsNetwork | Published : Apr 22, 2024 2:07 AM

ಸಾರಾಂಶ

ಚಿಕ್ಕಮಗಳೂರು ತಾಲೂಕಿನ ಇಂದಾವರ, ದಾಸರಹಳ್ಳಿ, ಮಲ್ಲೇನಹಳ್ಳಿ, ತೋಗರಿಹಂಕಲ್, ಅಲ್ಲಂಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಬದುಕಿನ ಬಗ್ಗೆ ಚಿಂತನೆ ಮಾಡುವ ಕಾಂಗ್ರೆಸ್‌ ಪಕ್ಷದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದ್ದಾರೆ. ತಾಲೂಕಿನ ಇಂದಾವರ, ದಾಸರಹಳ್ಳಿ, ಮಲ್ಲೇನಹಳ್ಳಿ, ತೋಗರಿಹಂಕಲ್, ಅಲ್ಲಂಪುರ ಗ್ರಾಪಂ ವ್ಯಾಪ್ತಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ರಾಜ್ಯದಲ್ಲಿ ಬದಲಾವಣೆ ತಂದು ಜನಪರ, ಬಡವರ ಪರ ಇರುವಂತ ಜನರ ಬದುಕಿನ ಬಗ್ಗೆ ಚಿಂತನೆ ಮಾಡುವ ಸರ್ಕಾರ ಬರಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ ಆಶೀರ್ವದಿಸಿದ್ದೀರಿ ಎಂದು ಹೇಳಿದರು.

ಆ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಅನುಷ್ಟಾನಕ್ಕೆ ತಂದು ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಿರುವುದನ್ನು ಖಂಡಿಸಿದರು.

ಭಾವನೆ ಕೆರಳಿಸಿ ಮತ ಪಡೆಯುವ ಬಿಜೆಪಿ ಜನಪರ ಬದುಕಿನ ಬಗ್ಗೆ ಚಿಂತನೆ ಮಾಡುವುದಿಲ್ಲ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಮಾದರಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಬಡ ಕುಟುಂಬದ ಮಹಿಳೆಗೆ ಒಂದು ಲಕ್ಷ ರು. ಖಾತೆಗೆ ಹಾಕುವುದಾಗಿ ಭರವಸೆ ನೀಡಿದೆ ಎಂದರು.

ಯುವ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆ ನ್ಯಾಯ ಎಂಬ 5 ಗ್ಯಾರಂಟಿ ಯೋಜನೆ ಘೋಷಿಸಿದ್ದು ಆದ್ದರಿಂದ ಈ ಬಾರಿ ಏ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೆಂಬಲಿಸಿ ಮತ ನೀಡಬೇಕೆಂದು ವಿನಂತಿಸಿದರು.

ಸಾಮಾಜಿಕ, ಆರ್ಥಿಕವಾಗಿ ಸಂವಿಧಾನದ ಆಶಯದಂತೆ ಸಮ ಸಮಾಜ ನಿರ್ಮಾಣ ಮಾಡಲು ಕಾಂಗ್ರೆಸ್ ಬದ್ಧವಾಗಿದೆ ಎಂದ ಅವರು, ಬಿಜೆಪಿ ಸರ್ಕಾರದಲ್ಲಿ 410 ರು.ನಿಂದ 960 ರು.ವರೆಗೆ ಗ್ಯಾಸ್‌ ಬೆಲೆ, ಪೆಟ್ರೋಲ್, ಡೀಸೆಲ್ ಬೆಲೆ ಸೇರಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದು ಬಡ ಜನರ ಜೀವನಕ್ಕೆ ಕುಂದುಂಟಾಗಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿ, ಹಿಂದೆ ಸಂಸದರಾಗಿ ಹಲವು ಜನಪರ ಯೋಜನೆ ತಂದು ಅಭಿವೃದ್ಧಿ ಮಾಡಿದ್ದು, ಈ ಬಾರಿ ಮತ್ತೊಮ್ಮೆ ಸರಳ ಸಜ್ಜನಿಕೆ ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆಯವರ ಹಸ್ತದ ಗುರುತಿಗೆ ಮತ ನೀಡಬೇಕೆಂದು ವಿನಂತಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟಗೆರೆ ಪ್ರವೀಣ್ ಮಾತನಾಡಿ, ಕಾಂಗ್ರೆಸ್ ಪಕ್ಷಕೊಟ್ಟ ಭರವಸೆಗಳನ್ನು ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಅನುಷ್ಠಾನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಮತ ನೀಡಿ ಗೆಲ್ಲಿಸಿದರೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಜನಪರ ಯೋಜನೆ ಜಾರಿ ಮಾಡುತ್ತಾರೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕೆ.ಮಹಮ್ಮದ್, ಅನಿಲ್‌ಕುಮಾರ್,ಶಂಕರ್, ಕುಮಾರ್, ಸೋಮಶೇಖರ್, ಗೋಪಿ, ಜಯರಾಜ್‌ ಅರಸು, ನಾಗಭೂಷಣ್, ಹಾಲೇಶ್, ಕುಮಾರ, ರಘು, ಸೋಮಶೆಟ್ಟಿ, ಶಂಕರ್, ರವಿ ಇದ್ದರು.

Share this article