ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಕೇವಲ ವೋಟ್‌ಬ್ಯಾಂಕ್‌ಗೋಸ್ಕರ ಬಹುಸಂಖ್ಯಾತರ ಹಿತಾಸಕ್ತಿಗೆ ದ್ರೋಹ ಬಗೆದು ಒಂದು ಕೋಮಿನ ಪರವಾಗಿ ತಿದ್ದುಪಡಿಗಳನ್ನು ತಂದಿತ್ತು. ಮೂರ್ನಾಲ್ಕು ಬಾರಿ ವಕ್ಫ್ ಕಾಯಿದೆಗೆ ತಿದ್ದುಪಡಿ ತಂದು ದೇಶವನ್ನೇ ವಕ್ಫ್ ಮಂಡಳಿಗೆ ಅಡವಿಟ್ಟಿತ್ತು. ಮುಸ್ಲಿಂ ರಾಷ್ಟ್ರಗಳಲ್ಲೇ ಸರ್ಕಾರದ ನಿಯಮದಡಿ ವಕ್ಫ್ ನಡೆಯುತ್ತಿರುವಾಗ ಭಾರತದಲ್ಲಿ ವಕ್ಫ್ ತನ್ನದೇ ಪ್ರತ್ಯೇಕ ಕಾನೂನಿನಡಿ ನಡೆಯುತ್ತಿತ್ತು. ಸಂವಿಧಾನದಲ್ಲಿ ವಕ್ಫ್‌ಗೆ ಅವಕಾಶವೇ ಇಲ್ಲದಿದ್ದರೂ ಇದು ಸಂವಿಧಾನ ಬಾಹೀರ ಎಂದು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜರಿದರು.
ರೈತರು, ಸರ್ಕಾರಿ ಆಸ್ತಿಗಳೆಲ್ಲವನ್ನೂ ತನ್ನದೇ ಎಂದು ಹೇಳಿಕೊಂಡು, ಯಾವುದೇ ಆಸ್ತಿಯ ಮೇಲೆ ಹಕ್ಕು ಸಾಧಿಸುವಂತಹ ಘನಘೋರ ವಕ್ಫ್ ಕಾಯಿದೆಗೆ ಕೇಂದ್ರಸರ್ಕಾರ ತಿದ್ದುಪಡಿ ತಂದಿರುವುದು ಖುಷಿಯ ವಿಚಾರ. ಇದನ್ನು ಅಭಿನಂದಿಸಲೇಬೇಕು. ಜನಪರ, ರೈತಪರವಾದ ನಿಲುವುಗಳನ್ನು ಕೈಗೊಂಡಾಗ ರಾಜಕೀಯ ದೃಷ್ಟಿಯಿಂದ ನೋಡಬಾರದು. ವಕ್ಫ್ ಕಾಯಿದೆಯಿಂದ ಸಾರ್ವಜನಿಕರು, ರೈತರು, ಸರ್ಕಾರದ ಆಸ್ತಿಗಳಿಗೆ ಕಂಟಕ ಎದುರಾದಾಗ ರಾಜ್ಯದಲ್ಲಿ ಆತಂಕಕಾರಿ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದು ಗೊತ್ತಿದ್ದೂ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವುದು ಬೇಡ ಎಂಬ ನಿರ್ಣಯವನ್ನು ಅಧಿವೇಶನದಲ್ಲಿ ಕೈಗೊಂಡ ರಾಜ್ಯ ಕಾಂಗ್ರೆಸ್ ಜನವಿರೋಧಿ, ರೈತವಿರೋಧಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಹಾಲಿನ ದರವನ್ನು ೯ ರು. ಏರಿಸಿ ಈಗ ೪ ರು.ಗಳನ್ನು ರೈತರಿಗೆ ಕೊಡುವುದಾಗಿ ಹೇಳುವ ಮೂಲಕ ದ್ರೋಹವೆಸಗುತ್ತಿದೆ. ರೈತರು ಪೂರೈಸುವ ಹಾಲಿಗೆ ಮೊದಲೇ ಎರಡು ರು. ಕಡಿತಗೊಳಿಸಿ ಈಗ ೪ ರು. ಏರಿಸಿದೆ. ಗ್ರಾಹಕರಿಗೆ ೯ ರು. ಏರಿಸಿ ರೈತರಿಗೆ ಕೇವಲ ೨ ರು. ಮಾತ್ರ ನೀಡುತ್ತಿದ್ದಾರೆ. ಇಂತಹ ರಾಜಕೀಯ ತಂತ್ರಗಾರಿಕೆ ಬುದ್ಧಿ ಯಾರಿಗೂ ತಿಳಿಯುವುದಿಲ್ಲವೆಂದು ತಿಳಿದಿದ್ದರೆ ಅದು ನಿಮ್ಮ ಮೂರ್ಖತನ ಎಂದು ಟೀಕಿಸಿದರು.
ಕೆಎಂಎಫ್ ಮೊಸರು, ಮಜ್ಜಿಗೆ, ಹಾಲಿನ ಉತ್ಪನ್ನಗಳನ್ನು ಮಾರಾಟಮಾಡಿ ಲಾಭ ಗಳಿಸುತ್ತಿದೆ. ಭ್ರಷ್ಟ ವ್ಯವಸ್ಥೆ ಆ ಲಾಭವನ್ನೆಲ್ಲಾ ತಿಂದುಹಾಕುತ್ತಿದೆ. ಇದಕ್ಕೆ ಕಡಿವಾಣ ಹಾಕದ ಸರ್ಕಾರಗಳು ಜಾಣಕುರುಡುತನ ಪ್ರದರ್ಶಿಸುತ್ತಿವೆ ಎಂದು ಆರೋಪಿಸಿದರು.