ಕಡೂರು: ಜನರ ಹಣವನ್ನು ಜನರಿಗೇ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಯ ಶಕ್ತಿ ನೀಡುವ ಉದ್ದೇಶದಿಂದಲೇ ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ಮಂಗಳವಾರ ಮಲ್ಲೇಶ್ವರದ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಪಕ್ಷದಲ್ಲಿ ಜಾತಿಯಿಲ್ಲ. ಅದು ಕಾರ್ಯಕರ್ತರ, ಎಲ್ಲ ಸಮುದಾಯಗಳನ್ನು ಒಳಗೊಂಡಿರುವ ನಿಜವಾದ ಜಾತ್ಯಾತೀತ ಪಕ್ಷ. ಪಕ್ಷದ ಮೂಲ ಸಿದ್ಧಾಂತವೇ ಸರ್ಕಾರದ ಧ್ಯೇಯವಾಗಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜಾತ್ಯಾತೀತವಾಗಿ ರಾಜ್ಯದ ಜನರಿಗೆ ತಲುಪಿರುವುದನ್ನು ವಿರೋಧ ಪಕ್ಷಗಳಿಗೆ ನುಂಗಲಾರದ ತುತ್ತಾದಂತಾಗಿದೆ ಎಂದರು. ಚಿಕ್ಕಮಗಳೂರು ಜಿಲ್ಲೆಯು ಕಾಂಗ್ರೆಸ್ ಪಕ್ಷದ ಐದು ಶಾಸಕರನ್ನು ಆರಿಸಿದ ಜಿಲ್ಲೆಯಾಗಿದೆ. ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿಯೂ ದೇಶದಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ಕಾರ್ಯಕರ್ತರು ಪಕ್ಷದ ಮತ್ತು ಸರ್ಕಾರದ ಸಾಧನೆಗಳನ್ನು ಜನತೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಪಂಚ ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಮೊಟಕಾಗುತ್ತದೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಸುಳ್ಳಾಗಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಇದೇ ಯೋಜನೆಗಳನ್ನು ಟೀಕಿಸಿದವರು ಇಂದು ಅದನ್ನೆ ಅನುಸರಿಸುತ್ತಿದ್ದಾರೆ ಎಂದರು.
16 ಬಾರಿ ಬಜೆಟ್ ಮಂಡಿಸಿದ ಅನುಭವಿ ಸಿದ್ದರಾಮಯ್ಯ ಅವರು ಆರ್ಥಿಕ ತಜ್ಞರು. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸದೆ ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿದ್ದಾರೆ. ವಿರೋಧಿಗಳ ಟೀಕೆ ಏನೇ ಇರಲಿ ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಗಮನ ಹರಿಸಬೇಕು ಎಂದು ಹೇಳಿದರು.ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಬರುವ ವರ್ಷವು ಚುನಾವಣಾ ವರ್ಷವಾಗಿರುವ ಕಾರಣ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ ಬರುವ ಗ್ರಾ.ಪಂ, ಜಿ.ಪಂ., ತಾ.ಪಂ.,ಪುರಸಭೆ ಮತ್ತಿತರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಶ್ರಮ ಹಾಕಬೇಕು ಎಂದು ಮನವಿ ಮಾಡಿದರು.ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಹಿರಿಯ ಪುರಸಭಾ ಸದಸ್ಯ ತೋಟದಮನೆ ಮೋಹನ್ ಮಾತನಾಡಿದರು.
ಭಧ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ, ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ವೀಕ್ಷಕ ರಮೇಶ್, ಮುಖಂಡರಾದ ಬಾಸೂರು ಚಂದ್ರಮೌಳಿ, ನಿಕಿತ್ ರಾಜ್ ಮೌರ್ಯ, ಕಂಸಾಗರ ಸೋಮಶೇಖರ್, ಶರತ್ ಕೃಷ್ಣಮೂರ್ತಿ, ತೋಟದಮನೆ ಮೋಹನ್, ಗುಮ್ಮನಹಳ್ಳಿ ಅಶೋಕ್, ಕೆ.ಜಿ.ಶ್ರೀನಿವಾಸ ಮೂರ್ತಿ, ಕಂಸಾಗರ ರೇವಣ್ಣ, ಸಾಣೇಹಳ್ಳಿ ರೇಣುಕಾರಾಧ್ಯ ಈರಳ್ಳಿ ರಮೇಶ್, ರಾಜೇಶ್, ಡಿ.ಎಸ್.ಉಮೇಶ್, ಹೋಚೀಹಳ್ಳಿ ಭೋಗಪ್ಪ ಮತ್ತಿತರರಿದ್ದರು.