ಮುತ್ತಪ್ಪ ರೈ ಪುತ್ರನ ಮೇಲಿನ ದಾಳಿ ಅಸಲಿಯೋ? ನಕಲಿಯೋ

KannadaprabhaNewsNetwork |  
Published : Apr 23, 2025, 02:02 AM IST
ಮುತ್ತಪ್ಪ ರೈ ಪುತ್ರ ರಿಕ್ಕಿ | Kannada Prabha

ಸಾರಾಂಶ

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸ್ವಯಂ ದಾಳಿ ಮಾಡಿಸಿಕೊಂಡಿರಬಹುದೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ ಅವರು ರಿಕ್ಕಿ ರೈ ಅವರೇ ಖುದ್ದಾಗಿ ದಾಳಿ ಮಾಡಿಸಿಕೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಶೂಟೌಟ್ ಅಸಲಿಯೋ- ನಕಲಿಯೋ ಎಂಬ ಜಿಜ್ಞಾಸೆ ಶುರುವಾಗಿದೆ.

ಗನ್‌ಮ್ಯಾನ್‌ ವಿಭಿನ್ನ ಹೇಳಿಕೆ ಹಿನ್ನೆಲೆ ಅನುಮಾನ

ಖುದ್ದು ದಾಳಿ ಆರೋಪ ಸುಳ್ಳು:ವಕೀಲರ ಸ್ಪಷ್ಟನೆ

==

ಅನುಮಾನ ಏಕೆ?

ರಿಕ್ಕಿ ರೈನ ಮೂವರು ಗನ್‌ಮ್ಯಾನ್‌ ನೀಡಿದ ಹೇಳಿಕೆಯಿಂದ ಪೊಲೀಸರಿಗೆ ದಾಳಿ ಬಗ್ಗೆ ಅನುಮಾನ

ಹೀಗಾಗಿ ಮೂವರು ಗನ್‌ಮ್ಯಾನ್‌ಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹ

ಸ್ವಯಂ ದಾಳಿಯ ಆರೋಪಗಳು ಸುಳ್ಳು ಎಂದು ರಿಕ್ಕಿ ಪರ ವಕೀಲ ನಾರಾಯಣ ಸ್ವಾಮಿ ಸ್ಪಷ್ಟನೆ

===

ಕನ್ನಡಪ್ರಭ ವಾರ್ತೆ ರಾಮನಗರ

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸ್ವಯಂ ದಾಳಿ ಮಾಡಿಸಿಕೊಂಡಿರಬಹುದೇ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ ಅವರು ರಿಕ್ಕಿ ರೈ ಅವರೇ ಖುದ್ದಾಗಿ ದಾಳಿ ಮಾಡಿಸಿಕೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಶೂಟೌಟ್ ಅಸಲಿಯೋ- ನಕಲಿಯೋ ಎಂಬ ಜಿಜ್ಞಾಸೆ ಶುರುವಾಗಿದೆ.

ರಿಕ್ಕಿ ರೈ ಭದ್ರತೆಗಾಗಿ ಮೂವರು ಗನ್​ ಮ್ಯಾನ್‌ ಗಳನ್ನು ಹೊಂದಿದ್ದಾರೆ. ತನಿಖೆ ವೇಳೆ ಮೂವರು ಗನ್ ಮ್ಯಾನ್‌ಗಳು ವಿಭಿನ್ನ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಇದರಿಂದಾಗಿ ರಿಕ್ಕಿ ರೈ ಸ್ವಯಂ ದಾಳಿ ಮಾಡಿಸಿಕೊಂಡಿರುವ ಅನುಮಾನ ಉಂಟಾಗಿ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಕೇಂದ್ರೀಕರಿಸಿದ್ದಾರೆ. ಆದರೆ ಮಾಧ್ಯಮಗಳಲ್ಲಿ ರಿಕ್ಕಿ ರೈ ಅವರೇ ಅಟ್ಯಾಕ್ ಮಾಡಿಸಿಕೊಂಡಿರುವ ಶಂಕೆಯ ಸುದ್ದಿ ಬರುತ್ತಿರುವುದು ಬೇಸರ ತರಿಸಿದೆ ಎಂದು ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ನಡುವೆ ಪ್ರಕರಣದ ತನಿಖೆ ಪೊಲೀಸರು ತೀವ್ರಗೊಳಿಸಿದ್ದು, ಈಗ ಪ್ರಕರಣದ ಸುತ್ತ ಹಲವು ಅನುಮಾನದ ಹೊಳಹು ಹರಡಿಕೊಂಡಿವೆ. ರಿಕ್ಕಿ ರೈ ಗನ್ ಮ್ಯಾನ್‌ ಮನ್ನಪ್ಪ ವಿಠ್ಠಲ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ತನಿಖೆ ದಿಕ್ಕು ತಪ್ಪಿಸಲು ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಸೇರಿ ನಾಲ್ವರ ವಿರುದ್ಧ ದೂರು ನೀಡಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಇದೇ ಕಾರಣಕ್ಕಾಗಿ ಪೊಲೀಸರು ರಿಕ್ಕಿ ರೈ ದಾಳಿ ನಡೆದ ಬಿಡದಿ ಬಳಿಯ ಕರಿಯಪ್ಪನದೊಡ್ಡಿ ಮನೆಯಲ್ಲಿ ಗನ್​ ಹಾಗೂ ಬುಲೆಟ್​ಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸಿಕ್ಕ ಬುಲೆಟ್​ ಕಾಟ್ರಿಡ್ಜ್​ ಇಟ್ಟುಕೊಂಡು, ಈ ಬುಲೆಟ್ ಅನ್ನು ಯಾವ ಗನ್​ ಮೂಲಕ ಹಾರಿಸಿದ್ದಾರೆ ಎಂಬುದನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಮೇಲ್ನೋಟಕ್ಕೆ ಎಸ್​ಬಿಬಿಎಲ್, ಅಂದರೆ ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಅಥವಾ ಡಿಬಿಬಿಎಲ್, ಅಂದರೆ ಡಬಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಎಂಬುದು ಪತ್ತೆಯಾಗಿದೆ. ಇದರ ನಡುವೆಯೇ ಹೊರಗಿನಿಂದ ಫೈರಿಂಗ್ ಮಾಡಿದ್ದೆ ಆದರೆ ಹೇಗೆ ಫೈರಿಂಗ್ ಮಾಡಿರಬಹದು ಎಂಬ ಕುರಿತೂ ತನಿಖೆ ಚುರುಕುಗೊಂಡಿದೆ. ರಸ್ತೆ ಪಕ್ಕದ ಲೇಔಟ್​ನ ಕಾಂಪೌಂಡ್ ಒಳಭಾಗದಿಂದ ಫೈರಿಂಗ್ ಆಗಿರಬಹುದು. ಶಾರ್ಪ್​ ಶೂಟರ್ಸ್​ಗಳು, ಕಾರಿನ ಮುಂಭಾಗದ ಡ್ರೈವರ್ ಸೀಟ್‌ನತ್ತ ಫೈರ್ ಮಾಡಿರಬಹುದು. ಫೈರ್ ಆಗಿರುವ ಗುಂಡು ಕಾರಿನಿಂದ ಹೊರಗೆ ಹೋಗಿಲ್ಲ. ಹೀಗಾಗಿ ಎಷ್ಟು ದೂರದಿಂದ ಫೈರ್ ಮಾಡಿರಬಹುದು ಎಂಬುದರ ಕುರಿತೂ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.

ಬಿಡದಿ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿದಾಗ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ನಾರಾಯಣಸ್ವಾಮಿ ಅವರು, ಬುಲೆಟ್ ಯಾರ ಮಾತನ್ನೂ ಕೇಳಲ್ಲ. ಅವರೇ ದಾಳಿ ಮಾಡಿಸಿಕೊಂಡು ಯಾರಾದರೂ ಪ್ರಾಣಕ್ಕೆ ಅಪಾಯ ಮಾಡಿಕೊಳ್ಳುತ್ತಾರಾ? ರಿಕ್ಕಿ ರೈ ಬಳಿ ಬುಲೆಟ್ ಪ್ರೂಫ್ ಕಾರ್ ಇದೆ. ಈ ರೀತಿ ಫೇಕ್ ದಾಳಿ ಮಾಡಿಸಿಕೊಳ್ಳುವುದಾಗಿದ್ದರೆ ಆ ಕಾರಿನಲ್ಲಿಯೇ ಬರುತ್ತಿದ್ದರು. ಆದರೆ ಅವರು ರೆಗ್ಯುಲರ್ ಕಾರನ್ನು ಬಳಸಿರುವಾಗ ದಾಳಿ ನಡೆದಿದೆ ಎಂದು ಹೇಳಿದರು.

ಎ-1 ರಾಕೇಶ್ ಮಲ್ಲಿ ವಿಚಾರಣೆಗೆ ಹಾಜರು:

ಮುತ್ತಪ್ಪ ರೈ ಒಂದು ಕಾಲದ ಆಪ್ತ ರಾಕೇಶ್ ಮಲ್ಲಿ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಿದ್ದರು. ಮಂಗಳವಾರ ರಾಕೇಶ್ ಮಲ್ಲಿ ಬಿಡದಿ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ವಕೀಲರ ಜೊತೆ ಆಗಮಿಸಿದ ರಾಕೇಶ್ ಮಲ್ಲಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್​ಗೌಡ ವಿಚಾರಣೆ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಮಕೂರು ಜಿಲ್ಲೆಯಾದ್ಯಂತ ದಟ್ಟ ಮಂಜು
ಸಂವಿಧಾನ ಅಳಿವು ಉಳಿವು ಸಂರಕ್ಷಣೆ ಕುರಿತು ಚಿಂತನ-ಮಂಥನ ಕಾರ್ಯಾಗಾರ