ಯಡಗೆರೆ ಮಂಜುನಾಥ್
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಸತ್ತಾಗ ಮಣ್ಣಾಗಿ, ಬೂದಿಯಾಗಿ ಹೋಗುವ ದೇಹವನ್ನು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಶಿಕ್ಷಕ ಆರ್.ನಾಗರಾಜ್ ಮತ್ತು ಶಶಿಕಲಾ ದಂಪತಿಗಳು ದೇಹವನ್ನು ದಾನ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ತಾಲೂಕಿನ ಸಂಕ್ಸೆ ( ಗುಡ್ಡೇಹಳ್ಳ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್.ನಾಗರಾಜ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವಾ ನಿರತೆಯಾಗಿರುವ ಶಶಿಕಲಾ ತಮ್ಮ ದೇಹವನ್ನು ದಾನ ಮಾಡಿದ್ದಾರೆ.2018 ನವಂಬರ್ 13 ರಂದು ಇಬ್ಬರು ದಂಪತಿಗಳು ಮಣಿಪಾಲದ ಕಸ್ತೂರಿ ಬಾ ಮೆಡಿಕಲ್ ಕಾಲೇಜಿಗೆ ತಮ್ಮ ನಂತರ ತಮ್ಮ ದೇಹವನ್ನು ದಾನ ಮಾಡುತ್ತೇವೆ ಎಂದು ರಿಜಿಸ್ಟರ್ ಮಾಡಿಸಿದ್ದರು. ಕೇವಲ 2 ದಿನಗಳಲ್ಲೇ ಕಸ್ತೂರಿ ಬಾ ಮೆಡಿಕಲ್ ಕಾಲೇಜಿನಿಂದ ಉತ್ತರ ಬಂದಿದ್ದು ಇವರ ದೇಹವನ್ನು ಸ್ವೀಕಾರ ಮಾಡಲು ಒಪ್ಪಿಗೆ ಸ್ವೀಕರಿಸಿದ್ದಾರೆ.
ದೇಹದಾನಕ್ಕೆ ಸ್ಫೂರ್ತಿ ಏನು?ಬಹಳ ವರ್ಷಗಳ ಹಿಂದೆ ಶಿಕ್ಷಕ ನಾಗರಾಜ್ ಅವರು ಮದ್ಯವ್ಯಸನ ಚಟಕ್ಕೆ ಬಿದ್ದಿದ್ದರು. ಕೊನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಏರ್ಪಡಿಸಿದ್ದ ಮದ್ಯವರ್ಜನ ಶಿಬಿರಕ್ಕೆ ದಾಖಲಾಗಿ ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಿ ಹೊಸ ಮನುಷ್ಯರಾಗಿ ಸಮಾಜಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಭವಿಷ್ಯದಲ್ಲಿ ಸಮಾಜಕ್ಕೆ ನಾನು ಏನಾದರೂ ಕೊಡುಗೆ ನೀಡಬೇಕು ಎಂಬ ಸಾಮಾಜಿಕ ಕಳಕಳಿ ಹೊಂದಿದ್ದರು. ಆ ಸಂದರ್ಭದಲ್ಲಿ ಆರ್.ನಾಗರಾಜ್ ಅವರ ತರೀಕೆರೆಯ ಮಿತ್ರ ಈಶ ಎಂಬುವರು ತಮ್ಮ ದೇಹವನ್ನು ದಾನವಾಗಿ ನೀಡಿದರು. ಜೊತೆಗೆ ಅವರ ತಂಗಿಯೂ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ನೀಡಿದರು.
ಇದರಿಂದ ಸ್ಫೂರ್ತಿ ಪಡೆದ ಶಿಕ್ಷಕ ಆರ್.ನಾಗರಾಜ್ ಈ ಬಗ್ಗೆ ಮೆಡಿಕಲ್ ಕಾಲೇಜಿನಿಂದ ಸಂಪೂರ್ಣ ಮಾಹಿತಿ ಪಡೆದರು. ನಂತರ ಪತ್ನಿ, ಮಕ್ಕಳು ಹಾಗೂ ಕುಟುಂಬದವರೊಂದಿಗೆ ಚರ್ಚೆ ನಡೆಸಿ ದೇಹ ದಾನ ಮಾಡುವ ತೀರ್ಮಾನಕ್ಕೆ ಬಂದು ಇಬ್ಬರೂ ದಂಪತಿಗಳು ಒಟ್ಟಿಗೆ 2018ರಲ್ಲಿ ಮಣಿಪಾಲ ಕಸ್ತೂರಿ ಬಾ ಮೆಡಿಕಲ್ ಕಾಲೇಜನ್ನು ಸಂಪರ್ಕ ಮಾಡಿ ತಮ್ಮ ದೇಹವನ್ನು ವಿಲ್ ಮಾಡಿಸಿದ್ದಾರೆ.ಪ್ರಾರಂಭದಲ್ಲಿ ಕುಟುಂಬದವರ ವಿರೋಧವೂ ವ್ಯಕ್ತವಾಗಿದೆ. ಸಂಪ್ರದಾಯದಂತೆ ಸತ್ತ ನಂತರ ದೇಹವನ್ನು ಸುಡುವುದು ಅಥವಾ ಹೂಳುವುದು ಮಾಡಿ ನಂತರ ವಿಧಿ, ವಿಧಾನವನ್ನು ನೆರವೇರಿಸಬೇಕಾಗುತ್ತದೆ. ಆದರೆ, ದೇಹ ದಾನ ಮಾಡಿದರೆ ಸತ್ತ 6 ಗಂಟೆಯ ಒಳಗೆ ದೇಹವನ್ನು ವಿಲ್ ಮಾಡಿದ ಮೆಡಿಕಲ್ ಕಾಲೇಜಿಗೆ ಒಪ್ಪಿಸಬೇಕಾಗುತ್ತದೆ. ಇದರಿಂದ ಸಂಪ್ರದಾಯದಂತೆ ಧಾರ್ಮಿಕ ಕಾರ್ಯ ಮಾಡಲು ಆಗುವುದಿಲ್ಲ ಎಂದು ಕುಟುಂಬದ ಕೆಲವು ಹಿರಿಯರ ವಿರೋಧ ಮಾಡಿದರೂ, ಆರ್.ನಾಗರಾಜ್ ಹಾಗೂ ಶಶಿಕಲಾ ದಂಪತಿಗಳು ಗಟ್ಟಿ ನಿರ್ಧಾರಕ್ಕೆ ಬಂದು ತಮ್ಮ ದೇಹವನ್ನು ದಾನ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.ಸಮಾಜಕ್ಕೆ ದೊಡ್ಡ ಕೊಡುಗೆ ನೀಡಬೇಕು ಎಂದು ನಾನು ಹಾಗೂ ನನ್ನ ಪತ್ನಿ ತೀರ್ಮಾನಿಸಿ ದೇಹ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ. ಮಕ್ಕಳ ಒಪ್ಪಿಗೆಯೂ ದೊರಕಿದೆ. ಅನೇಕರು, ತಮ್ಮ ಕಣ್ಣು, ಮೆದುಳು, ಹೃದಯ ಸೇರಿದಂತೆ ಅಂಗಾಂಗ ದಾನ ಮಾಡುತ್ತಾರೆ. ನಾವು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅನುಕೂಲವಾಗಲಿ ಎಂದು ದೇಹ ದಾನ ಮಾಡಿದ್ದೇವೆ. ಧಾರ್ಮಿಕ ಕಟ್ಟಪಾಡು ಇದ್ದರೂ ವೈಜ್ಞಾನಿಕ ಚಿಂತನೆ ಮಾಡಿ ಭವಿಷ್ಯದಲ್ಲಿ ಸಮಾಜಕ್ಕೆ ಅನುಕೂಲವಾಗಲಿದೆ ಎಂದು ನಂಬಿದ್ದೇನೆ.
- ಆರ್.ನಾಗರಾಜ್, ಮುಖ್ಯ ಶಿಕ್ಷಕರು, ಸಂಕ್ಸೆ ಸರ್ಕಾರಿ ಶಾಲೆ, ದೇಹ ದಾನಿಗಳುಕಸ್ತೂರಿ ಬಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪ್ರತಿ ವರ್ಷ 12 ದೇಹ ಬೇಕಾಗುತ್ತದೆ. ಆಸಕ್ತಿ ಇರುವ ಯಾರೂ ಬೇಕಾದರೂ ತಮ್ಮ ದೇಹವನ್ನು ದಾನ ಮಾಡಬಹುದು. ದೇಹ ದಾನ ತುಂಬಾ ಒಳ್ಳೆಯ ಕಾರ್ಯವಾಗಿದೆ. ಸತ್ತ ತಕ್ಷಣ ವಿಲ್ ಮಾಡಿದ ಆಸ್ಪತ್ರೆಗೆ ತಿಳಿಸಬೇಕು. 6 ಗಂಟೆಯ ಒಳಗೆ ದೇಹವನ್ನು ತೆಗೆದುಕೊಂಡು ಹೋಗುತ್ತೇವೆ. ದೇಹ ದಾನ ಮಾಡುವವರು ಮೊ.ನಂ.9886738555 ಸಂಪರ್ಕಿಸಬಹುದಾಗಿದೆ.- ಡಾ.ಚಾಂದನಿ ಗುಪ್ತಾ, ಕಸ್ತೂರಿ ಬಾ ಮೆಡಿಕಲ್ ಕಾಲೇಜಿನ ಡಿಪಾರ್ಟ್‌ಮೆಂಟ್ ಆಫ್ ಅನಾಟಮಿಯ ಮುಖ್ಯಸ್ಥರು, ಮಣಿಪಾಲನಮ್ಮ ದೇಹವನ್ನು ದಾನ ಮಾಡುವುದರಿಂದ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಿಕ್ಷಕ ವೃತ್ತಿ ಮಾಡುತ್ತಿರುವ ಆರ್.ನಾಗರಾಜ್ ದಂಪತಿಗಳು ದೇಹವನ್ನು ದಾನ ಮಾಡಿರುವುದು ಶ್ಲಾಘನೀಯವಾಗಿದೆ. ಇವರ ಕಾರ್ಯ ಇತರ ಶಿಕ್ಷಕರಿಗೆ ಮಾದರಿಯಾಗಿದೆ.
- ಬಿ.ನಂಜುಂಡಪ್ಪ, ಅಧ್ಯಕ್ಷರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ನರಸಿಂಹರಾಜಪುರನಾನು ಧ.ಗ್ರಾ.ಯೋಜನೆಯಲ್ಲಿ ಸೇವಾ ನಿರತೆಯಾಗಿ ಕೆಲಸ ಮಾಡುತ್ತಿದ್ದು ಧರ್ಮಸ್ಥಳದ ಹೇಮಾವತಿ ಅಮ್ಮನವರು ಹಾಗೂ ಡಾ.ವೀರೇಂದ್ರ ಹೆಗ್ಗಡೆ ಅವರ ಸೇವೆ ಗಮನಿಸಿ ಸ್ಫೂರ್ತಿ ಪಡೆದು ನಾನು ಸಹ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ದೇಹ ದಾನ ಮಾಡಿದ್ದೇನೆ.- ಶಶಿಕಲಾ ನಾಗರಾಜ್, ಸೇವಾ ನಿರತೆ, ಧ.ಗ್ರಾ.ಯೋಜನೆ, ನರಸಿಂಹರಾಜಪುರ