- ಗೃಹ ಕಚೇರಿಯಲ್ಲಿ ಸಾಂಕೇತಿಕವಾಗಿ ಅರ್ಹರಿಗೆ ಬಿ ಖಾತಾ ಪ್ರಮಾಣ ಪತ್ರಗಳ ವಿತರಣೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸಿದೆ. ಜನತೆ ನಂಬುಗೆಯ ಸರ್ಕಾರ ಎಂದು ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಬಡವರ, ನಿರ್ಗತಿಕರ, ದೀನದಲಿತರ ಅಭಿವೃದ್ಧಿಗೆ ಕಾಂಗ್ರೆಸ್ ಪಣತೊಟ್ಟಿದೆ. ಈ ಹಿಂದೆ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಆಶ್ರಯ ಮನೆಗಳ ನಿರ್ಮಾಣವಾಗಿದ್ದು, ಪ್ರಸ್ತುತ ಒಂದೊಂದು ಮನೆಯ ಬೆಲೆ ₹35-₹40 ಲಕ್ಷ ಆಗಿವೆ. 40 ಸಾವಿರಕ್ಕೂ ಅಧಿಕ ಮನೆಗಳನ್ನು ಅಕ್ರಮ-ಸಕ್ರಮದಡಿ ವಿಲೇವಾರಿ ಮಾಡಲಾಗಿದೆ. ಪ್ರಸ್ತುತ ಸರ್ಕಾರದ ನೂತನ ಯೋಜನೆ ಆಗಿರುವ ಇ-ಖಾತಾ ಅಭಿಯಾನದಡಿ 20 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗಲಿವೆ ಎಂದರು.
ಇ-ಖಾತಾ ಪ್ರಮಾಣ ಪತ್ರ ನೀಡಲು ಪಾಲಿಕೆಯಿಂದ ₹10 ಸಾವಿರ ನಿಗದಿ ಮಾಡಲಾಗಿತ್ತು. ಬಡವರಿಗೆ ಇದು ಹೊರೆಯಾಗಲಿದೆ ಎಂದು ಸಂಬಂಧಪಟ್ಟವರಿಗೆ ಸೂಚಿಸಿದ್ದರಿಂದ ಉಚಿತವಾಗಿ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿನ ಬೇತೂರು ರಸ್ತೆ, ಎಲ್ಲಮ್ಮ ನಗರ, ನಿಟುವಳ್ಳಿ, ಅಶೋಕ ನಗರ, ಬೂದಾಳು ರಸ್ತೆ, ಮಾಗನಹಳ್ಳಿ ರಸ್ತೆ, ಪಾಮೇನಹಳ್ಳಿ, ಬಸಾಪುರ ಸೇರಿದಂತೆ ಸುಮಾರು ಜನರು ಇ-ಖಾತೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಮೂಲಕ ಸಾಂಕೇತಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯ ಶಾಸಕರಿಂದ 250 ಅರ್ಹ ಫಲಾನುಭವಿಗಳಿಗೆ ಬಿ-ಖಾತಾ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೂಚನೆಯಂತೆ ಇ-ಖಾತಾ ವಿತರಣೆ ಗೊಂದಲ ನಿವಾರಣೆಯಾಗಿದೆ. ಅರ್ಹರು ಅರ್ಜಿಗಳನ್ನು ಸಲ್ಲಿಸಿ ಯೋಜನೆ ಸದುಪಯೋಗ ಪಡೆಯಲು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಕೆ.ಚಮನ್ ಸಾಬ್, ಪಾಲಿಕೆಯ ಮಾಜಿ ಸದಸ್ಯ ಎ.ನಾಗರಾಜ್, ಇತರರು ಉಪಸ್ಥಿತರಿದ್ದರು.- - - -10ಕೆಡಿವಿಜಿ48, 49.ಜೆಪಿಜಿ:
ದಾವಣಗೆರೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅರ್ಹ ಫಲಾನುಭವಿಗಳಿಗೆ ಬಿ-ಖಾತಾ ಪ್ರಮಾಣ ಪತ್ರಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು.