ಮುಂಡರಗಿ: ಡಾ.ಬಿ.ಆರ್. ಅಂಬೇಡ್ಕರ ಅವರಿಗೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಿಂದ ಅವರ ಕೊನೆಯ ದಿನಗಳವರೆಗೂ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದೆಯೇ ಹೊರತು ಅವರ ಪರವಾಗಿ ಯಾವತ್ತೂ ಇರಲಿಲ್ಲ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಸಂವಿಧಾನ ಕರಡು ಸಮಿತಿ ಸಭೆಯನ್ನು ಕರೆದಾಗಲೂ ಸಹ ಅಂಬೇಡ್ಕರ್ ಬರದಂತೆ ನೋಡಿಕೊಂಡು ಇದಕ್ಕೆ ಒಕ್ಕೂಟ ವ್ಯವಸ್ಥೆಯಿಂದ ಬರಬೇಕೆಂದು ಯೋಚಿಸಿ ಚುನಾವಣೆ ಮಾಡಿದಾಗ ಬಂಗಾಳ ರಾಜರೊಬ್ಬರು ಅಂಬೇಡ್ಕರ್ ಅವರನ್ನು ಗೆಲ್ಲಿಸಿಕಳಿಸುತ್ತಾರೆ. ಆದರೆ ಆ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ.
1951ರಲ್ಲಿ ಕಾಶ್ಮೀರದ ವಿಷಯ, ಹಿಂದೂಕೋಡ್ ಬಿಲ್ ವಿಷಯ ಬಂದಾಗಲೂ ಸಹ ಅಂಬೇಡ್ಕರ್ ಅವರ ಮಾತಿಗೆ ಗೌರವ ಸಿಗದ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಕ್ಕೆ ಯಾರೂ ವಿರೋಧಿಸಲಿಲ್ಲ. ನಂತರ 1952ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಅಂಬೇಡ್ಕರ್ ಅವರಿಗೆ ನೀಡುವ ಬದಲು ಅವರ ಶಿಷ್ಯನಿಗೆ ಟಿಕೇಟ್ ಕೊಟ್ಟಿದ್ದರು. ಆಗ ಅಂಬೇಡ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಆ ಸಂದರ್ಭದಲ್ಲಿ ನೆಹರು ಅವರು 2 ಬಾರಿ ಅಂಬೇಡ್ಕರ್ ವಿರುದ್ದ ಪ್ರಚಾರ ಭಾಷಣ ಮಾಡಲು ಹೋಗಿ ಅವರನ್ನು ಸೋಲಿಸಿದ್ದರು. ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆ 6 ಅಡಿ 3 ಅಡಿ ಜಾಗೆ ಕೊಡಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ಪಕ್ಷದವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.