ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ

KannadaprabhaNewsNetwork | Published : Apr 14, 2025 1:17 AM

ಸಾರಾಂಶ

ಬ್ರಿಟಿಷರಂತೆ ರಾಜ್ಯದ ಕಾಂಗ್ರೆಸ್ ಸರ್ಕಾರವೂ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ದ್ವೇಷ ತುಂಬಿ ತನ್ನ ಅಧಿಕಾರದ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಟೀಕಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಬ್ರಿಟಿಷರಂತೆ ರಾಜ್ಯದ ಕಾಂಗ್ರೆಸ್ ಸರ್ಕಾರವೂ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ದ್ವೇಷ ತುಂಬಿ ತನ್ನ ಅಧಿಕಾರದ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಟೀಕಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಪಕ್ಷದ ಸಕ್ರಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮುಸ್ಲಿಮ್‌ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾದ 16 ಕಾಲೇಜುಗಳನ್ನು ಸ್ಥಾಪನೆ ಮಾಡಲು ಹೊರಟಿದೆ. ಈ ಮೊದಲು ಮುಸ್ಲಿಮ್‌ ಹೆಣ್ಣುಮಕ್ಕಳು ನಮ್ಮೊಂದಿಗೆ ವಿದ್ಯಾಭ್ಯಾಸ ಮಾಡುತ್ತಿರಲಿಲ್ಲವೆ? ಈಗೇಕೆ ಅವರನ್ನು ಪ್ರತ್ಯೇಕಗೊಳಿಸುತ್ತಿರುವುದು ಎಂದು ಪ್ರಶ್ನಿಸಿದರು.

ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುವ ಮುಸ್ಲಿಮ್‌ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸರ್ಕಾರ ವಿಶೇಷ ಸವಲತ್ತು ಕೊಡುವುದಂತೆ, ಯಾಕೆ, ಬೇರೆ ಜಾತಿ, ಧರ್ಮದಲ್ಲಿ ಬಡವರಿಲ್ಲವೆ, ಅವರ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರ ನೆರವಾಗಬೇಕಲ್ಲವೆ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಸರ್ಕಾರ ಜಾತಿ, ಧರ್ಮ ನೋಡದೆ ಎಲ್ಲಾ ವರ್ಗದ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿತು. ಮುಸ್ಲಿಮ್‌ ಹೆಣ್ಣುಮಕ್ಕಳೂ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಮುಸ್ಲಿಮ್‌ ಹೆಣ್ಣುಮಕ್ಕಳ ಆತ್ಮರಕ್ಷಣೆಗೆ ಕಾಂಗ್ರೆಸ್ ತರಬೇತಿ ನೀಡುವ ಕಾರ್ಯಕ್ರಮ ತರುವುದಂತೆ. ಉಳಿದ ಹೆಣ್ಣುಮಕ್ಕಳಿಗೆ ರಕ್ಷಣೆ ಬೇಡವೆ? ಲವ್ ಜಿಹಾದಿಗೆ ಒಳಗಾಗುತ್ತಿರುವ ಹಿಂದೂ ಹೆಣ್ಣುಮಕ್ಕಳ ಆತ್ಮರಕ್ಷಣೆ ಹೆಚ್ಚು ಅತ್ಯಗತ್ಯವಾಗಿದೆ. ಹೀಗೆ ಕಾಂಗ್ರೆಸ್ ಸರ್ಕಾರ ಜಾತಿ, ಧರ್ಮಗಳನ್ನು ಒಡೆದು ಆಳುತ್ತಿದೆ. ಒಬ್ಬರಿಗೊಬ್ಬರು ಶಾಂತಿ, ಸಹನೆಯಿಂದ ಬಾಳಲು ಬಿಡುತ್ತಿಲ್ಲ ಎಂದು ಆರೋಪಿಸಿದರು.

ಕಾರ್ಯಕರ್ತರು ಪಕ್ಷದ ಸಂಘಟನೆ, ಪಕ್ಷದ ಚುನಾವಣೆ ಗೆಲುವಿನ ಬಗ್ಗೆ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸಬೇಕು. ಬಿಜೆಪಿ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸಬೇಕು. ಆ ಮೂಲಕ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಶ್ರಮಿಸಬೇಕು. ಕಾರ್ಯಕರ್ತರು ಹಳ್ಳಿಗಳಲ್ಲಿ, ವಾರ್ಡ್ಗಳಲ್ಲಿ ಮನೆಮನೆಗೆ ಹೋಗಿ ಜನರಿಗೆ ಈ ಬಗ್ಗೆ ತಿಳಿಸಬೇಕು. ಮಂಡಲಗಳು ವಾರಕ್ಕೊಮ್ಮೆ ತಪ್ಪದೇ ಸಭೆ ಮಾಡಿ, ಮುಂದಿನ ಕರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಭಾರತಿ ಶೆಟ್ಟಿ ತಿಳಿಸಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಅತಿ ಹೆಚ್ಚು ಸ್ಟಾಟ್‌ ಅಪ್‌ಗಳು ಆರಂಭವಾಗುತ್ತಿರುವುದು ನಮ್ಮ ದೇಶದಲ್ಲೇ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಪ್ರೇರಣೆ ಎಂದರು.

ಮಹಿಳೆಯರು ರಾಜಕಾರಣಕ್ಕೆ ಪ್ರವೇಶ ಮಾಡಬೇಕು ಎಂದು ಹಲವು ವರ್ಷಗಳಿಂದ ಕೇವಲ ಭಾಷಣ ಕೇಳಿಕೊಂಡೇ ಬಂದೆವು. ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿಯನ್ನು ಮಸೂದೆ ಮಾಡುವ ಮೂಲಕ ರಾಜಕಾರಣದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡುವ ಮಹತ್ತರ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಕಲ್ಪಿಸಿದೆ. ಮಹಿಳೆಯರಿಗೆ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಮೋದಿಯವರಿಗಿದೆ. ನಿರ್ಮಲ ಸೀತಾರಾಮನ್ ಅವರು ಇಂದು ಹಣಕಾಸು ಸಚಿವೆಯಾಗಿ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ನಗರ ಅಧ್ಯಕ್ಷ ಧನುಷ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಎಸ್ಸಿ ಮೋರ್ಚಾ ನಗರಾಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಸತ್ಯಮಂಗಲ ಜಗದೀಶ್, ಬನಶಂಕರಿಬಾಬು, ಜ್ಯೋತಿ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು ಭಾಗವಹಿಸಿದ್ದರು.

Share this article