ಕಾಂಗ್ರೆಸ್ ದೆಹಲಿಯಿಂದ-ಬೆಂಗಳೂರುವರೆಗೂ ಗೊಂದಲದಲ್ಲಿದೆ

KannadaprabhaNewsNetwork | Published : Jan 13, 2024 1:33 AM

ಸಾರಾಂಶ

ಕಾಂಗ್ರೆಸ್ ಪಕ್ಷ ದೆಹಲಿಯಿಂದ ಬೆಂಗಳೂರಿನವರೆಗೂ ಗೊಂದಲದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ರಾಯಚೂರು: ಕಾಂಗ್ರೆಸ್ ಪಕ್ಷ ದೆಹಲಿಯಿಂದ ಬೆಂಗಳೂರಿನವರೆಗೂ ಗೊಂದಲದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಿಣಿ ಕನಕ ಗುರುಪೀಠದಲ್ಲಿ ಶುಕ್ರವಾರ ಮಾತನಾಡಿದ ಅವರು, ಒಂದು ಕಡೆ ಮೂರು ಡಿಸಿಎಂ ಮಾಡುವ ಚರ್ಚೆ, ಮತ್ತೊಂದು ಕಡೆ ಅಲ್ಪಸಂಖ್ಯಾತರ ಒಲೈಕೆಗಾಗಿ ರಾಮಮಂದಿರ ಉದ್ಘಾಟನೆ ಆಹ್ವಾನ ಬಂದಿಲ್ಲ, ಹೋಗಲ್ಲ ಎನ್ನುವ ಕಾಂಗ್ರೆಸ್ ಬರೀ ಪೇಪರ್‌ನಲ್ಲಿ ಮಾತ್ರ ಐದು ಗ್ಯಾರಂಟಿಗಳ ಜಾರಿ ಮಾಡಿದೆ. ಬರ ನಿರ್ವಹಣೆಯಲ್ಲಿ ಸಹ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.

ಜ.22ರಂದು ಶ್ರೀರಾಮಮಂದಿರ ಉದ್ಘಾಟನೆ ನಡೆಯುತ್ತಿರುವ ದಿನದ ವೇಳೆಯೇ ಕಾಂಗ್ರೆಸ್ ಸರ್ಕಾರ ಮುಜರಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಆದೇಶ ಮಾಡಿದ್ದಾರೆ ಮತ್ತೊಂದು ಕಡೆ ಅಯೋದ್ಯೇಯಿಂದ ಆಹ್ವಾನ ಪತ್ರ ಬಂದಿಲ್ಲ ಎನ್ನುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರಿಗೆ ಆಹ್ವಾನ ಬಂದಿದೆ ಅವರು ಹೋಗಲ್ಲವೆಂದು ತೀರ್ಮಾನ ಮಾಡುತ್ತಾರೆ ಹೀಗೆ ಕಾಂಗ್ರೆಸ್ ಪಕ್ಷದಲ್ಲಿ ದೆಹಲಿಯಿಂದ ಬೆಂಗಳೂರುವರೆಗೆ ಗೊಂದಲದಲ್ಲಿಯೇ ಮುಳುಗಿದೆ ಎಂದು ಹೇಳಿದರು.

ರೈತ, ಬಡ ಹಾಗೂ ಜನವಿರೋಧಿ ಸರ್ಕಾರವಾಗಿದೆ.ಪೇಪರ್ಗಳಲ್ಲಿ ಜಾಹಿರಾತು ನೀಡಿದ ತಕ್ಷಣ ಕಾಂಗ್ರೆಸ್ನ ಐದು ಗ್ಯಾರಂಟಿಗಳು ಜನರಿಗೆ ತಲುಪಿದೆ ಎಂದು ಅರ್ಥವಲ್ಲ, ಐದು ಗ್ಯಾರಂಟಿಗಳ ವಿರುದ್ಧ ಈಗಾಗಲೇ ಜನರು ಶಾಪಹಾಕುತ್ತಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಬರದಿಂದ ಐನೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಪಂಪ್ಸೆಟ್ಗಳಿಗೆ ತ್ರೀಫೇಜ್ ಕರೆಂಟ್ ನ್ನು 7 ತಾಸು ನೀಡಲು ಸಹ ಸರ್ಕಾರಕ್ಕೆ ಆಗುತ್ತಿಲ್ಲ,ಮುಖ್ಯಮಂತ್ರಿ ನಡುವಳಿಕೆ ನೋಡುತ್ತಿದ್ದರೇ ಬರೀ ಅಲ್ಪಸಂಖ್ಯಾತರ ಮತಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಬಂದಿರುವಹಾಗೆ ಅನ್ನಿಸುತ್ತಿದೆ ಎಂದರು.

ದೇಶದಲ್ಲಿ ಬಿಜೆಪಿ ಹಾಗೂ ಮೋದಿ ಪರ ಅಲೆ ಜೋರಾಗಿದೆ ಇದು ಕಾಂಗ್ರೆಸ್ಸಿಗರನ್ನು ಆತಂಕಕ್ಕೀಡು ಮಾಡಿದೆ. ಶ್ರೀರಾಮ ಮಂದಿರ ವಿಚಾರದಲ್ಲಿ ಅಲ್ಪಸಂಖ್ಯಾತರ ತೃಷ್ಠೀಕರಣದ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದ್ದು, ಕಾಂಗ್ರೆಸ್ನ ಎಲ್ಲ ಗೊಂದಲಕಾರಿ ನಡೆ ಸೇರಿ ಎಲ್ಲವನ್ನು ಮತದಾರರು ಗಮನಿಸುತ್ತಿದ್ದಾರೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಾತ್ರಿಯಾಗಿದ್ದು ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this article