ಕಾಂಗ್ರೆಸ್ ಕೋಟ್ಯಂತರ ಜನರ ಶ್ರಮದಿಂದ ಬೆಳೆಯುತ್ತಿದೆ । ಪವರ್ ಶೇರಿಂಗ್ ಬಗ್ಗೆ ಹೈಕಮಾಂಡ್ ತೀರ್ಮಾನ
ಜಾತಿಗಣತಿ ವರದಿ ಬಿಡುಗಡೆಯು ರಾಷ್ಟ್ರದ ನಿಲುವಾಗಿದ್ದು, ನಾವು, ನಮ್ಮ ಪಕ್ಷ ಸಹ ಜಾತಿಗಣತಿ ವರದಿ ಬಿಡುಗಡೆ ಪರವಾಗಿಯೇ ಇದ್ದೇವೆ ಎಂದು ಮಾಜಿ ಸಂಸದ, ಕಾಂಗ್ರೆಸ್ಸಿನ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು.
ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೂರಕ್ಕೆ ನೂರರಷ್ಟು ಜಾತಿ ಜನಗಣತಿ ವರದಿಯನ್ನೇ ಬಿಡುಗಡೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದು, ನಾವು, ನಮ್ಮ ಪಕ್ಷ ಸಹ ಜಾತಿಗಣತಿ ವರದಿ ಬಿಡುಗಡೆ ಪರವಾಗಿದ್ದೇವೆ ಎಂದರು.ಹಲವಾರು ಜಾತಿ ಇರುವ ಸಮಾಜದಲ್ಲಿ ಜಾತಿಗಣತಿ ಬಗ್ಗೆ ಅನುಮಾನವಿದೆ. ಆದರೆ, ಜಾತಿಗಣತಿ ವರದಿ ಹೊರ ಬಂದ ನಂತರವೇ ತಾನೇ ಅದರ ಬಗ್ಗೆ ಗೊತ್ತಾಗುವುದು, ವರದಿಯ ಸಾಧಕ- ಬಾಧಕಗಳ ಬಗ್ಗೆ ತಿಳಿಯುವುದು. ಮೊದಲು ವರದಿ ಬಿಡುಗಡೆಯಾಗಲಿ. ಆ ನಂತರ ಅದರ ಬಗ್ಗೆ ಚರ್ಚೆ ಮಾಡಬೇಕೇ ಹೊರತು, ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಮಾಡುವುದು ಸರಿಯಲ್ಲ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕೆ ಜಾತ್ಯತೀತ ವ್ಯವಸ್ಥೆಯನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಇಂತಹ ಕಾಂಗ್ರೆಸ್ ಪಕ್ಷವು ಉಳಿದಿರುವುದು, ಬೆಳೆಯುತ್ತಿರುವುದು ಅಲ್ಲೊಬ್ಬ, ಇಲ್ಲೊಬ್ಬ ನಾಯಕನಿಂದಲ್ಲ. ಕೋಟ್ಯಂತರ ಜನರ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷವು ಉಳಿದಿದೆ. ಪಕ್ಷವನ್ನು ಉಳಿಸಿ, ಬೆಳೆಸುವ ದಿಕ್ಕಿನಲ್ಲಿ ಪ್ರತಿಯೊಬ್ಬ ನಾಯಕರ ಪ್ರಯತ್ನವೂ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಕೆಂಗಾಪುರ ಮುಳ್ಳು ಗದ್ದುಗೆ ಪವಾಡ, ಸ್ವಾಮೀಜಿ ಕಾರ್ಣಿಕ
ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳಿನ ಗದ್ದುಗೆ ಪವಾಡಕ್ಕೆ ಕಾಂಗ್ರೆಸ್ಸಿನ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಚಾಲನೆ ನೀಡಿದರು.
ಕಾರ್ಮೋಡ ಕವಿದೀತು, ಮುತ್ತಿನ ಹನಿಗಳು ಉದುರೀತು, ತೂಗುವ ತೊಟ್ಟಿಲು ಕೈ ತಪ್ಪೀತು. ನಾನಿದ್ದೀನಲೇ ಪರಾಕ್ ಎಂದು ಸ್ವಾಮೀಜಿ ಈ ಬಾರಿ ಕಾರ್ಣಿಕ ನುಡಿದಿದ್ದಾರೆ. ಮಹಾ ಶಿವರಾತ್ರಿ ಮಾರನೆಯ ದಿನ ಚನ್ನಗಿರಿ ತಾ. ಕೆಂಗಾಪುರ ಗ್ರಾಮದಲ್ಲಿ ಮುಳ್ಳು ಗದ್ದುಗೆಯ ಪವಾಡದ ಐತಿಹಾಸಿಕ ಜಾತ್ರೆ ಮಹೋತ್ಸವ ನಡೆಯಿತು.