ಹಾವೇರಿ: ಯುವ ಜನತೆ ಸೋಗಿನಲ್ಲಿ ಕಾಂಗ್ರೆಸ್, ಎಡಪಂಥೀಯ ಮತ್ತು ಸಿಜೆಪಿ ದೇಶ ವಿರೋಧಿ ಚಟುವಟಿಕೆಗೆ ಪ್ರಚೋದನೆ ನೀಡುತ್ತಿರುವುದನ್ನು, ಸಂಸತ್ ಭವನಕ್ಕೆ ನುಗ್ಗಲು ಪ್ರಯತ್ನಿಸಿರುವುದನ್ನು ಖಂಡಿಸಿ ಯೂತ್ ಫಾರ್ ನೇಷನ್ ಧ್ಯೇಯವಾಕ್ಯದಡಿ ಬಿಜೆಪಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ, ನೀಟ್ ವಿಚಾರವನ್ನು ರಾಜಕೀಯಗೊಳಿಸಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸಂಸತ್ತಿನ ಕಲಾಪಕ್ಕೂ ಅಡ್ಡಿಪಡಿಸುತ್ತಿವೆ. ಕಾಂಗ್ರೆಸ್‌ಗೆ ಪ್ರತಿಭಟಿಸುವ ನೈತಿಕತೆಯೇ ಇಲ್ಲ. 2004ರಿಂದ 2014ರ ಅವಧಿಯಲ್ಲಿ ಹಲವು ಸಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯಕ್ಕಾಗಿ ಹಾಗೂ ಯುವಜನತೆ ದಾರಿತಪ್ಪಿಸಲು ಹೋರಾಟ ಮಾಡುತ್ತಿದೆ ಎಂದು ಎಂದು ಆರೋಪಿಸಿದರು.
ಮುಖಂಡ ಭೋಜರಾಜ ಕರೂದಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟ ಯುವಕರನ್ನು ಪ್ರಚೋದಿಸಿ ದೇಶ ವಿರೋಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.ಖ್ಯಾತ ವೈದ್ಯ ಡಾ. ಬಸವರಾಜ ಕೆಲಗಾರ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿದ್ದು, ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ದೇಶದ ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲವು ಶಕ್ತಿಗಳು ವಿದೇಶಿ ಬೆಂಬಲದೊಂದಿಗೆ ಷಡ್ಯಂತ್ರ ರೂಪಿಸುತ್ತಿದ್ದು, ವಿದೇಶಿ ಅನುದಾನದ ದುರುಪಯೋಗ ತಡೆಯಲು ಕೇಂದ್ರ ಸರ್ಕಾರ ಎಫ್‌ಸಿಆರ್‌ಎ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ, ಮಾಜಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ನೀಲಪ್ಪ ಚಾವಡಿ, ಡಾ.ಸಂತೋಷ ಆಲದಕಟ್ಟಿ, ಸಿದ್ದಪ್ಪ ಚಿಕ್ಕಬಿದರಿ, ಕಿರಣ್ ಕೊಳ್ಳಿ, ನಿರಂಜನ್ ಹೇರೂರು, ಕಿರಣ ಕೋಣನವರ, ಗಂಗಾಧರ ಬಾಣದ, ವಿಜಯಕುಮಾರ ಚಿನ್ನಿಕಟ್ಟಿ, ಮುರಿಗೆಪ್ಪ ಶೆಟ್ಟರ, ಡಿ.ಎಸ್. ಮಾಳಗಿ, ಮಾಲತೇಶ ಸೊಪ್ಪಿನ, ವೆಂಕಟೇಶ ನಾರಾಯಣಿ, ಪ್ರಭು ಹಿಟ್ನಳ್ಳಿ, ಪರಮೇಶಪ್ಪ ಮೆಗಳಮನಿ, ಕಲ್ಯಾಣಕುಮಾರ ಶೆಟ್ಟರ, ಪ್ರಕಾಶ ಉಜನಿಕೊಪ್ಪ, ಗುಡ್ಡಪ್ಪ ಭರಡಿ, ಶಿವಯೋಗಿ ಶಿರೂರು, ಮುತ್ತಣ್ಣ ಮುಷ್ಠಿ, ಕರಬಸಪ್ಪ ಹಳದೂರ, ಲತಾ ಬಡ್ನಿಮಠ, ರೋಹಿಣಿ ಪಾಟೀಲ, ಮಂಜುಳಾ ಕರಬಸಮ್ಮನವರ, ಸುಜಾತ ಆರಾಧ್ಯಮಠ, ಅಕ್ಷತಾ ಮಾಳಗಿಮನಿ, ಸರೋಜಾ ಉಳ್ಳಾಗಡ್ಡಿ ಸೇರಿದಂತೆ ಅನೇಕರು ಇದ್ದರು.