ಕನ್ನಡಪ್ರಭ ವಾರ್ತೆ ಬೆಳಗಾವಿಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತರುತ್ತಿದೆ ಎಂದು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ನಿರ್ದೇಶಕ ಪ್ರೊ.ಬಿ.ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತರುತ್ತಿದೆ ಎಂದು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ನಿರ್ದೇಶಕ ಪ್ರೊ.ಬಿ.ರವಿ ಹೇಳಿದರು.

ನಗರದ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಂತ್ರಜ್ಞಾನ ಸಂಸ್ಥೆ (ಕೆಎಲ್ಎಸ್ ಜಿಐಟಿ)ಯಲ್ಲಿ 10ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಎಐ ತಂತ್ರಜ್ಞಾನವನ್ನು ತಮ್ಮ ಚಿಂತನೆ ಮತ್ತು ಕಾರ್ಯವೈಖರಿಯಲ್ಲಿ ಅಳವಡಿಸಿಕೊಳ್ಳಬೇಕು. ಆದರೆ, ತಂತ್ರಜ್ಞಾನದ ಬಳಕೆಯೊಂದಿಗೆ ನೈತಿಕತೆ, ಭಾವನಾತ್ಮಕ ಮೌಲ್ಯಗಳು ಹಾಗೂ ಸಹಾನುಭೂತಿಗೂ ಆದ್ಯತೆ ನೀಡಬೇಕು. ವೈಯಕ್ತಿಕ ಸಾಧನೆಯ ಜತೆಗೆ ರಾಷ್ಟ್ರಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ಬಯೋಮೆಟ್ರಿಕ್ ಸಿಸ್ಟಮ್ಸ್ ಸಂಸ್ಥಾಪಕ ಹಾಗೂ ಸಿಇಒ ರಾಮ್ ಕುಂಚೂರ್ ಮಾತನಾಡಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿಯೂ ಕೋಡಿಂಗ್‌ನ ಮೂಲಭೂತ ಅಂಶಗಳ ಕುರಿತು ಗಟ್ಟಿಯಾದ ಜ್ಞಾನ ಹೊಂದಿರುವುದು ಅತ್ಯಗತ್ಯ. ತಂತ್ರಜ್ಞಾನ ಬದಲಾದರೂ ಮೂಲಭೂತ ಜ್ಞಾನದ ಮಹತ್ವ ಕಡಿಮೆಯಾಗುವುದಿಲ್ಲ. ವಿದ್ಯಾರ್ಥಿಗಳು ನಿರಂತರ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಹಾಗೂ ಬೆಂಗಳೂರಿನ ಸುಂದರಸ್ವಾಮಿ ಆ್ಯಂಡ್‌ ರಾಮದಾಸ್ ಅಡ್ವೊಕೇಟ್ಸ್‌ನ ಹಿರಿಯ ಪಾಲುದಾರ ಪ್ರದೀಪ್ ಎಸ್.ಸಾವ್ಕಾರ್ ಅಧ್ಯಕ್ಷೀಯ ಭಾಷಣ ಮಾಡಿದರು.

ಸಂಸ್ಥೆಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 2026ನೇ ಸಾಲಿನ ಬಿಇ, ಬಿ.ಆರ್ಕ್, ಎಂ.ಟೆಕ್, ಎಂಬಿಎ ಹಾಗೂ ಎಂಸಿಎ ವಿಭಾಗಗಳ ಒಟ್ಟು 1,123 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಂಸ್ಥೆಯ 47 ವರ್ಷಗಳ ಶೈಕ್ಷಣಿಕ ಸಾಧನೆಯ ಪಯಣದಲ್ಲಿ ಮತ್ತೊಂದು ಮೈಲಿಗಲ್ಲಾದ ಸಮಾರಂಭವು ಗಣ್ಯರ ಮೆರವಣಿಗೆಯೊಂದಿಗೆ ಆರಂಭವಾಯಿತು. ಕರ್ನಾಟಕ ಲಾ ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲ ಡಾ.ವಿಜಯ ಆಥವಲೆ ಅವರು ಕಳೆದ ವರ್ಷದ ಶೈಕ್ಷಣಿಕ ಸಾಧನೆಗಳು ಹಾಗೂ ಸಂಸ್ಥೆಯ ಪ್ರಗತಿಯ ವರದಿ ಮಂಡಿಸಿದರು. ಸಮಾರಂಭದಲ್ಲಿ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಶೈಕ್ಷಣಿಕ ಸಾಧನೆ ಮಾಡಿದ 42 ವಿದ್ಯಾರ್ಥಿಗಳಿಗೆ ರ್‍ಯಾಂಕ್‌ ಮತ್ತು ಅರ್ಹತಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಒಟ್ಟು 1,123 ಪದವೀಧರರಲ್ಲಿ 855 ಮಂದಿ ಸ್ನಾತಕ ಪದವೀಧರರಾಗಿದ್ದು, ಇವರಲ್ಲಿ 802 ಬಿಇ ಹಾಗೂ 53 ಬಿ.ಆರ್ಕ್ ವಿದ್ಯಾರ್ಥಿಗಳಿದ್ದಾರೆ. ಇನ್ನು 268 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದು, 38 ಎಂ.ಟೆಕ್, 116 ಎಂಬಿಎ ಹಾಗೂ 114 ಎಂಸಿಎ ವಿದ್ಯಾರ್ಥಿಗಳು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಆಯಾ ವಿಭಾಗಗಳ ವತಿಯಿಂದ ಪ್ರತ್ಯೇಕ ಪದವಿ ಪ್ರದಾನ ಸಮಾರಂಭಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪದವಿಗಳನ್ನು ವಿತರಿಸಲಾಗುವುದು ಎಂದು ಸಂಸ್ಥೆ ಘೋಷಿಸಿತು.

ಸಮಾರಂಭದಲ್ಲಿ ಕೆಎಲ್ಎಸ್ ಉಪಾಧ್ಯಕ್ಷ ಆರ್.ಬಿ.ಭಂಡಾರೆ, ಡಿ.ವಿ.ಕುಲಕರ್ಣಿ, ಕಾರ್ಯದರ್ಶಿಗಳಾದ ವಿ.ಎಂ.ದೇಶಪಾಂಡೆ, ಎಸ್.ವಿ.ಗಣಾಚಾರಿ, ಕೆಎಲ್ಎಸ್ ಬೆಳಗಾವಿ ಅಧ್ಯಕ್ಷ ಎ.ಕೆ.ತಗಾರೆ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಕರ್ನಾಟಕ ಲಾ ಸೊಸೈಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.