ಕನ್ನಡಪ್ರಭ ವಾರ್ತೆ ಹಾಸನ
ಮಹಿಳಾ ಮೀಸಲು ಮಸೂದೆ ವಿಚಾರವಾಗಿ ದೇಶದಾದ್ಯಂತ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಂಸದರ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಮಹಿಳಾ ಮೀಸಲು ಮಸೂದೆ ಹೊಸದೇನೂ ಅಲ್ಲ, ಇದಕ್ಕೆ ದೀರ್ಘ ಇತಿಹಾಸವಿದೆ. ೨೦೨೩ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ಮಸೂದೆ ಕುರಿತು ಚರ್ಚೆ ನಡೆದಿದ್ದು, ಇದರ ಜಾರಿಗೆ ಮೂಲ ಕಾರಣಗಳಲ್ಲಿ ಒಂದಾಗಿ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ದೃಷ್ಟಿಕೋನವನ್ನು ಉಲ್ಲೇಖಿಸಿದರು. ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಪ್ರತಿನಿಧಿತ್ವ ನೀಡಬೇಕು ಎಂಬುದು ರಾಜೀವ್ ಗಾಂಧಿ ಅವರ ಕನಸಾಗಿತ್ತು. ಅದನ್ನು ನಾವು ಸಹ ಗೌರವಿಸುತ್ತೇವೆ ಎಂದು ಹೇಳಿದರು. ಆದರೆ, ಈ ಮಸೂದೆಯನ್ನು ನೆಪವಾಗಿ ಬಳಸಿಕೊಂಡು ಕ್ಷೇತ್ರ ಮರುವಿಂಗಡಣೆ ಡೆಲಿಮಿನೇಶನ್ ಕಾಯಿದೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಅವರು ತೀವ್ರವಾಗಿ ವಿರೋಧಿಸಿದರು. ಸಂವಿಧಾನ ತಿದ್ದುಪಡಿಗೆ ೨/೩ ಬಹುಮತ ಅಗತ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಅದನ್ನು ಲೆಕ್ಕಿಸದೇ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.ಇನ್ನು, ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ಸರ್ವಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೇ ತುರ್ತು ನಿರ್ಧಾರ ಕೈಗೊಳ್ಳಲು ಯತ್ನಿಸಿರುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧ ಎಂದು ಅವರು ಹೇಳಿದರು. ರಾಜ್ಯ ಸರ್ಕಾರದ ಪ್ರತಿನಿಧಿಗಳ ಸಭೆಯನ್ನೂ ಕೂಡ ನಡೆಸಿಲ್ಲ. ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು, ಒಮ್ಮತದೊಂದಿಗೆ ಮುಂದೆ ಸಾಗಬೇಕಿತ್ತು ಎಂದು ಟೀಕಿಸಿದರು. ಇಂಡಿಯಾ ಕೂಟವನ್ನು ಮಹಿಳಾ ವಿರೋಧಿ ಎಂದು ಬಿಂಬಿಸುವ ಪ್ರಯತ್ನಗಳನ್ನೂ ಅವರು ಖಂಡಿಸಿದರು. ನಾವು ಮಹಿಳಾ ಮೀಸಲಾತಿಗೆ ಯಾವತ್ತೂ ವಿರೋಧಿಸಿಲ್ಲ. ಬಿಜೆಪಿ ನಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಜನರನ್ನು ತಪ್ಪು ದಾರಿಗೆಳೆವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರ ಮರುವಿಂಗಡಣೆ ಬಗ್ಗೆ ಮಾತನಾಡಿದ ಅವರು, “ಇದು ೨೦-೨೫ ವರ್ಷಕ್ಕೊಮ್ಮೆ ನಡೆಯುವ ಪ್ರಕ್ರಿಯೆ. ಅದನ್ನು ಸಮರ್ಪಕವಾಗಿ, ಜನಸಂಖ್ಯೆ ಆಧಾರಿತವಾಗಿ, ನ್ಯಾಯಸಮ್ಮತವಾಗಿ ಮಾಡಬೇಕು. ಆದರೆ ಅದನ್ನು ಮಹಿಳಾ ಮೀಸಲು ಮಸೂದೆಗೆ ಕಟ್ಟಿ ಹಾಕುವುದು ಸರಿಯಲ್ಲ,” ಎಂದು ಅಭಿಪ್ರಾಯಪಟ್ಟರು. ಮುಂದಿನ ದಾರಿಯ ಬಗ್ಗೆ ಮಾತನಾಡಿದ ಅವರು, ೨೦೨೬ರ ಜನಗಣತಿ ಬಳಿಕ ಮಹಿಳಾ ಮೀಸಲು ಮಸೂದೆ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು. “ಜನಗಣತಿ ನಂತರ ಸರಿಯಾದ ಅಂಕಿಅಂಶಗಳ ಆಧಾರದಲ್ಲಿ, ಎಲ್ಲಾ ಪಕ್ಷಗಳ ವಿಶ್ವಾಸ ಪಡೆದು ಮಸೂದೆ ಜಾರಿಗೆ ತರಲಿ. ಅದಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ,” ಎಂದರು. ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲು ಮಸೂದೆ ಮಂಡಿಸಿದರೆ ತಮ್ಮ ಬೆಂಬಲ ಇರುವುದಾಗಿ ತಿಳಿಸಿದ ಅವರು, “ರಾಜೀವ್ ಗಾಂಧಿ ಅವರ ಕನಸನ್ನು ನನಸಾಗಿಸುವ ದಿಸೆಯಲ್ಲಿ ನಾವು ಕೆಲಸ ಮಾಡುತ್ತೇವೆ. ಮಹಿಳೆಯರಿಗೆ ನ್ಯಾಯಯುತ ಹಕ್ಕು ದೊರಕಬೇಕು ಎಂಬುದು ನಮ್ಮ ನಿಲುವು,” ಎಂದು ಪುನರುಚ್ಚರಿಸಿದರು.ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಶಶಿಧರ್, ಕೃಷ್ಣಕುಮಾರ್ ಇತರರು ಇದ್ದರು.