ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮುಂಬರುವ ಎಂಡಿಸಿಸಿ ಬ್ಯಾಂಕ್ ಮತ್ತು ಟಿಎಪಿಸಿಎಂಎಸ್ ಚುನಾವಣೆಯನ್ನು ಸರ್ಕಾರ ವಾಮಮಾರ್ಗದಲ್ಲಿ ನಡೆಸಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಂಚು ನಡೆಸಿದೆ. ಜೆಡಿಎಸ್ ಕಾರ್ಯಕರ್ತರು ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ತಮ್ಮ ಸಾಮರ್ಥ್ಯ ಏನೆಂದು ತೋರಿಸಲು ಮುಂದಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮುಂಬರುವ ಎಂಡಿಸಿಸಿ ಬ್ಯಾಂಕ್ ಮತ್ತು ಟಿಎಪಿಸಿಎಂಎಸ್ ಚುನಾವಣಾ ಸಂಬಂಧ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೆಲವು ಸೊಸೈಟಿಗಳಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಕೆಲವು ಕಡೆ ಸೆಕ್ಷನ್ 307 ಕೇಸ್ ಹಾಕಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ನಾಯಕರ ಇಂಥ ಕುತಂತ್ರಗಳಿಗೆ ಜೆಡಿಎಸ್ ಧೃತಿಗೆಡಬೇಕಾಗಿಲ್ಲ. ಜೆಡಿಎಸ್ ಕಾರ್ಯಕರ್ತರ ಪಕ್ಷ. ನೀವು ಸಬಲರಾಗಿದ್ದರೆ ಮಾತ್ರ ನಾಯಕರು. ಘಟಾನುಘಟಿ ನಾಯಕರು ಜೆಡಿಎಸ್ ಪಕ್ಷ ಬಿಟ್ಟು ಹೋದರೂ ತಾಲೂಕಿನಲ್ಲಿ ಪಕ್ಷ ಸದೃಢವಾಗಿದೆ ಎಂದರು.ಕಾಂಗ್ರೆಸ್ ಚುನಾವಣೆಯಲ್ಲಿ ವಾಮಮಾರ್ಗದ ಮೂಲಕ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದೆ. ಆದರೆ, ಇದಕ್ಕೆ ನಾನಾಗಲೀ ಅಥವಾ ನಮ್ಮ ಕಾರ್ಯಕರ್ತರಾಗಲೀ ಎದೆಗುಂದಿಲ್ಲ. ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಬೆನ್ನುಲುಬಾಗಿ ನಿಂತಿದ್ದೇನೆ. ಜೆಡಿಎಸ್ ನ ಪ್ರತಿಯೊಬ್ಬ ಕಾರ್ಯಕರ್ತನೂ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ತಮ್ಮ ಸಾಮರ್ಥ್ಯ ತೋರಿಸಲು ಸಿದ್ದರಾಗಬೇಕು. ನಾವು ಟಿಎಪಿಸಿಎಂಎಸ್ ಹಾಗೂ ಎಂಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಎಂಥ ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಯಕರ್ತರ ಹಿತಕಾಯುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.ಈ ವೇಳೆ ಮುಂಬರುವ ಎಂಡಿಸಿಸಿ ಬ್ಯಾಂಕ್ ಚುನಾವಣೆಗೆ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಜೈನಹಳ್ಳಿ ಸೊಸೈಟಿ ನಿರ್ದೇಶಕ ಸಿಂಗನಹಳ್ಳಿ ಧರಣೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ಮಹಿಳಾ ಜೆಡಿಎಸ್ ಘಟಕದ ಅಧ್ಯಕ್ಷೆ ರೇಖಾ ಲೋಕೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಯುವ ಜನತಾದಳದ ತಾಲೂಕು ಅಧ್ಯಕ್ಷ ಮಹದೇವೇಗೌಡ, ತಾಪಂ ಮಾಜಿ ಸದಸ್ಯರಾದ ಹುಲ್ಲೇಗೌಡ, ಮಲ್ಲೇನಹಳ್ಳಿ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕರಾದ ಶೀಳನೆರೆ ಮೋಹನ್, ಟಿ.ಬಲದೇವ್, ದಿನೇಶ್, ಮುಖಂಡರಾದ ಬೇಲದಕೆರೆ ನಂಜಪ್ಪ, ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷರಾದ ವಸಂತಕುಮಾರ್, ಬಸವಲಿಂಗಪ್ಪ, ಸ್ವಾಮಿಗೌಡ, ಮುಖಂಡ ತೋಂಟಪ್ಪಶೆಟ್ಟಿ ಸೇರಿ ಹಲವಾರು ಮುಖಂಡರು ಕಾರ್ಯಕರ್ತರು ಹಾಜರಿದ್ದರು.