ಹಲಗೂರು: ನಂಜೇಗೌಡನದೊಡ್ಡಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳಿಂದ ಅಕ್ರಮವಾಗಿ ಒತ್ತುವರಿಯಾಗಿದ್ದ ರಸ್ತೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ಶನಿವಾರ ತೆರವುಗೊಳಿಸಿದರು.
ಇದರಿಂದ ನೆರೆಹೊರೆಯ ಜಮೀನುಗಳಿಗೆ ರೈತರು ಕೃಷಿ ಚಟುವಟಿಕೆ ನಡೆಸಲು ಹೋಗಿ ಬರಲು ತೀವ್ರ ತೊಂದರೆ ಪಡಬೇಕಾಗಿತ್ತು. ಕೃಷಿ ಚಟುವಟಿಕೆಗಳನ್ನು ನಿಲ್ಲಿಸುವಂತಾಗಿದೆ. ರೈತರು, ಸಾರ್ವಜನಿಕರು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲ ಆಗುವಂತೆ ರಸ್ತೆ ತೆರವು ಮಾಡಿ ಕೊಡಬೇಕೆಂದು ಗ್ರಾಮದ ಶಂಭು ಮಳವಳ್ಳಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.
ಈ ಸಂಬಂಧ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಕಸಬಾ 2ನೇ ವೃತ್ತದ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಾಲೂಕು ಸರ್ವೇಯರ್ ಎಂ.ಎಸ್.ಬೀರೇಶ್ ಶನಿವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿ ಸಂಬಂಧಿಸಿದ ರಸ್ತೆಯ ಜಾಗವನ್ನು ಗುರುತಿಸಿದರು.ಹಲಗೂರು ಠಾಣೆ ಎಎಸ್ಐ ಶಿವಣ್ಣ ಮತ್ತು ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಸದರಿ ಕಾಲು ದಾರಿಯನ್ನು ಜೆ.ಸಿ.ಬಿ ಯಂತ್ರದಿಂದ ತೆರವು ಗೊಳಿಸಿ ರೈತರ ಜಮೀನುಗಳಿಗೆ ಸಂಚರಿಸಲು ಅನುವು ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರಾದ ಸುದರ್ಶನ್, ಎಎಸ್ಐ ಶಿವಣ್ಣ, ಅರ್ಜಿದಾರ ಶಂಭು, ಪೇದೆ ಚಂದ್ರಕಾಂತ್, ಕಂದಾಯ ಇಲಾಖೆ ಸುಭಾಷ್ ಭರಣಿ, ಗ್ರಾಮಸ್ಥರಾದ ಶಿವಸ್ವಾಮಿ, ಮಹದೇವಸ್ವಾಮಿ, ನಂಜುಂಡಪ್ಪ, ಪ್ರಭು, ಮುತ್ತಯ್ಯ, ಬಾಲಸುಂದರ್ ಸೇರಿ ಹಲವರು ಇದ್ದರು.