ಕಾಂಗ್ರೆಸ್‌ ಬಲಿಷ್ಠವಾಗಿದೆ, ಹೆಬ್ಬಾರ್‌ ಪುತ್ರನಿಂದಲೇ ಬಲ ಬರಬೇಕೆಂದಿಲ್ಲ: ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : Apr 14, 2024, 01:48 AM IST
ಮುಂಡಗೋಡ: ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಪತ್ರಕರ್ತರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಯಾರಾದರೂ ಪಕ್ಷಕ್ಕೆ ಬಂದರೆ ಮಾತ್ರ ಪಕ್ಷಕ್ಕೆ ಬಲ ಬರಬೇಕೆಂದಿಲ್ಲ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಎಂದು ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಕಟುವಾಗಿ ನುಡಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಕಾಂಗ್ರೆಸ್ ಪಕ್ಷ ಯಾವತ್ತೂ ಬಲಿಷ್ಠವಾಗಿದೆ. ಇಷ್ಟು ವರ್ಷವಾದರೂ ನನ್ನ ದೇಹ ಹೇಗೆ ದಷ್ಟಪುಷ್ಟವಾಗಿದೆಯೋ ಕಾಂಗ್ರೆಸ್ ಪಕ್ಷದ ಬಲ ಕೂಡ ಹಾಗೆಯೇ ಇದೆ. ನಿತ್ಯ ಸಾಕಷ್ಟು ಜನ ಪಕ್ಷಕ್ಕೆ ಬರುವವರು ಹೋಗುವವರು ಇದ್ದೇ ಇರುತ್ತಾರೆ. ಅದರಿಂದ ಪಕ್ಷಕ್ಕೆ ಏನು ವ್ಯತ್ಯಾಸವಾಗುವುದಿಲ್ಲ. ಯಾರಾದರೂ ಪಕ್ಷಕ್ಕೆ ಬಂದರೆ ಮಾತ್ರ ಪಕ್ಷಕ್ಕೆ ಬಲ ಬರಬೇಕೆಂದಿಲ್ಲ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಎಂದು ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಕಟುವಾಗಿ ನುಡಿದರು.

ಶನಿವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮುಗಿಸಿ ತೆರಳುತ್ತಿರುವ ಸಂದರ್ಭದಲ್ಲಿ ಶಿವರಾಮ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ ಜೊತೆಗೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಎಷ್ಟು ಬಲ ಬಂದಂತಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲರಾದ ಆರ್.ವಿ. ದೇಶಪಾಂಡೆ, ಸಾವಿರಾರು ಸಂಖ್ಯೆಯಲ್ಲಿ ಜನ ಪಕ್ಷ ಸೇರುವುದು ಹುಡುಗಾಟಿಕೆಯ ಮಾತಲ್ಲ. ಸಾವಿರಾರು ಜನ ಎಲ್ಲಿಂದ ಬರುತ್ತಾರೆ. ದೊಡ್ಡ ದೊಡ್ಡ ಸಭೆ ಮಾಡಿದಾಗಲೇ ಸಾವಿರಾರು ಜನ ಬರುವುದಿಲ್ಲ. ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದ ಸಭಾಂಗಣ ೫೦೦ ಜನ ಕುಳಿತುಕೊಳ್ಳುವ ಸಾಮರ್ಥ್ಯವಿಲ್ಲ. ಹಾಗಾಗಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪಕ್ಷ ಸೇರಿದ್ದಾರೆ ಎಂದರೆ ನಂಬಬಹುದು. ಅದು ಬಿಟ್ಟು ಸಾವಿರಾರು ಜನ ಎಂದು ಹೇಗೆ ಹೇಳುತ್ತೀರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಅವರು, ಹಿಂದೆ ನಮ್ಮ ಸರ್ಕಾರವಿದ್ದಾಗ ಪಕ್ಷ ಬಿಟ್ಟು ಹೋಗಿ ಬಿಜೆಪಿಯಲ್ಲಿ ಮಂತ್ರಿಯಾಗಿದ್ದವರು ಮತ್ತೆ ಮರಳಿ ಬರುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾದವರಿಂದ ಪಕ್ಷಕ್ಕೆ ಲಾಭ ನಷ್ಟ ಮುಂದಿನ ದಿನದಲ್ಲಿ ತಿಳಿಯುತ್ತದೆ ಎಂದು ಉತ್ತರಿಸುವ ಮೂಲಕ ಅಸಮಾಧಾನ ಹೊರಹಾಕಿದರು. ಇದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ತೋರಿಸಿಕೊಟ್ಟಿತು.

ಪಕ್ಷಕ್ಕೆ ಆರೋಗ್ಯಕರ ಸ್ಥಿತಿ:

ಕಾಂಗ್ರೆಸ್ ಪಕ್ಷದ ಸ್ಥಿತಿ ಉತ್ತರಕನ್ನಡ ಜಿಲ್ಲೆಯಲ್ಲಿ ಆರೋಗ್ಯಕರವಾಗಿದೆ. ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ೨ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು. ಆದರೆ, ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗೇ ಅಲೆಯುವಂತಾಗಿದೆ. ಬೆಲೆ ಏರಿಕೆ ಸಮಸ್ಯೆ ಉಲ್ಬಣವಾಗಿದೆ. ಇದಕ್ಕೆ ಯಾರು ಹೊಣೆ? ಇದನ್ನೆಲ್ಲ ಅರಿತಿರುವ ಜನ ತಕ್ಕ ಉತ್ತರ ನೀಡಲಿದ್ದು, ರಾಜ್ಯದಲ್ಲಿ ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಕೇಂದದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ, ಮಾಜಿ ಶಾಸಕ ವಿ.ಎಸ್. ಪಾಟೀಲ ಮುಂತಾದವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ