ಕಾಂಗ್ರೆಸ್ಸಿಗೆ 20 ಸ್ಥಾನ ಖಚಿತ : ಸಿದ್ದರಾಮಯ್ಯ

KannadaprabhaNewsNetwork |  
Published : Apr 30, 2024, 02:00 AM IST
ಕೂಡ್ಲಿಗಿ ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ಸೋಮವಾರ ಮದ್ಯಾಹ್ನ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಆಯೋಜಿಸಿದ್ದ ಅದ್ದೂರಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.  | Kannada Prabha

ಸಾರಾಂಶ

ಸಮೀಕ್ಷೆಯೊಂದರಲ್ಲಿ ಬಿಜೆಪಿಗೆ 260 ರಿಂದ 220 ಸ್ಥಾನಗಳನ್ನು ಪಡೆಯುತ್ತದೆ ಎಂದು ತಿಳಿಸಲಾಗಿತ್ತು. ಇದನ್ನು ಮೋದಿ ಡಿಲೀಟ್ ಮಾಡಿಸುವ ಮೂಲಕ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ.

ಕೂಡ್ಲಿಗಿ: ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಓಡಾಡುವ ಮೂಲಕ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಈ ಬಾರಿ 20ಕ್ಕೂ ಅಧಿಕ ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಸಮೀಕ್ಷೆಯೊಂದರಲ್ಲಿ ಬಿಜೆಪಿಗೆ 260 ರಿಂದ 220 ಸ್ಥಾನಗಳನ್ನು ಪಡೆಯುತ್ತದೆ ಎಂದು ತಿಳಿಸಲಾಗಿತ್ತು. ಇದನ್ನು ಮೋದಿ ಡಿಲೀಟ್ ಮಾಡಿಸುವ ಮೂಲಕ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.

ಗ್ಯಾರಂಟಿಗಳಿಗೆ ಹಣ ಜೋಡಿಸುವುದೇ ಕಷ್ಟ, ಇನ್ನು ಅಭಿವೃದ್ದಿ ಎಲ್ಲಿಂದ ಮಾಡುತ್ತಾರೆ ಎಂದು ಕೆಲವರು ಟೀಕಿಸಿದ್ದಾರೆ. 2024-25ನೇ ಸಾಲಿನಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ರು ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದೇವೆ. ಕೂಡ್ಲಿಗಿ ಕ್ಷೇತ್ರವೊಂದಕ್ಕೆ ಒಂದು ವರ್ಷದ ಅವಧಿಯಲ್ಲಿ ₹600 ಕೋಟಿ ಅನುದಾನ ನೀಡಿದ್ದೇವೆ ಎಂದರೆ ನೀವೇ ತಿಳಿದುಕೊಳ್ಳಿ, ಕಾಂಗ್ರೆಸ್ ಅಭಿವೃದ್ಧಿಯ ಪರ ಇದೆಯೋ ಇಲ್ಲವೋ ಎಂದು ಹೇಳಿದರು.

ಮನಮೋಹನ್ ಸಿಂಗ್ ಸರ್ಕಾರ ಕೇಂದ್ರದಲ್ಲಿದ್ದಾಗ ದೇಶದ ರೈತರ ₹72 ಸಾವಿರ ಕೋಟಿ ಸಾಲಮನ್ನಾ ಮಾಡಲಾಗಿತ್ತು. ಆದರೆ ಮೋದಿ ಇಲ್ಲಿವರೆಗೂ ಯಾವ ರೈತರ ಸಾಲಮನ್ನಾ ಮಾಡಿದ್ದಾರೆ? ರೈತರ ಸಾಲಮನ್ನಾ ಮಾಡುವ ಬದಲು ಅದಾನಿ-ಅಂಬಾನಿಯಂತಹ ಶ್ರೀಮಂತ ಉದ್ಯಮಿಗಳ ₹16 ಲಕ್ಷ ಕೋಟಿ ಸಾಲಮನ್ನಾ ಮಾಡಿರುವುದೇ ಮೋದಿ ಸಾಧನೆ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್, ಬಳ್ಳಾರಿ ಲೋಕಸಭೆ ಕ್ಷೇತ್ರದ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್, ಎನ್.ವೈ. ಗೋಪಾಲಕೃಷ್ಣ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎನ್.ಎಂ. ನಬಿಸಾಬ್, ಪಿ.ಟಿ. ಪರಮೇಶ್ವರ ನಾಯ್ಕ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಮುಖಂಡರಾದ ಎನ್.ಟಿ.ತಮ್ಮಣ್ಣ, ಎನ್.ಎಂ.ನೂರ್ ಅಹಮದ್, ರಾಜೇಂದ್ರ ಪ್ರಸಾದ್, ಕಾವಲಿ ಶಿವಪ್ಪನಾಯಕ, ಕೆ.ಎಂ.ಶಶಿಧರ, ಮುಂಡ್ರಿಗಿ ನಾಗರಾಜ, ರಾಣಿ ಸಂಯುಕ್ತಾ, ಮೊಳಕಾಲ್ಮೂರು ಜಯಲಕ್ಷ್ಮಿ, ಬಣವಿಕಲ್ಲು ಎರಿಸ್ವಾಮಿ, ಕೋಗಳಿ ಮಂಜುನಾಥ, ಹಿರೇಕುಂಬಳಗುಂಟೆ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ