ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದಲ್ಲಿ ಶನಿವಾರ ಪಾಲಿಕೆ ಬಿಜೆಪಿ ಸದಸ್ಯರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆಯ ವಿಪಕ್ಷ ನಾಯಕ ಇಬ್ರಾಹಿಂಬಾಬು, ಕಾಂಗ್ರೆಸ್ ಆಡಳಿತದಲ್ಲಿ ಸಾರ್ವಜನಿಕರು ಪರಿತಪಿಸುವಂತಾಗಿದೆ. ಮೇಯರ್ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ವಿನಾಕಾರಣ ಜನರಲ್ಲಿ ಗೊಂದಲ ಮೂಡಿಸಿದೆ. ಇದರಿಂದ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದೂ ಮೇಯರ್ ಚುನಾವಣೆಗೆ ಗೊಂದಲ ಸೃಷ್ಟಿಸಲಾಗಿದೆ. ಕಳೆದ ವರ್ಷ ನಡೆದ ಮೇಯರ್ ಚುನಾವಣೆಯಲ್ಲಿ ಮುಲ್ಲಂಗಿ ನಂದೀಶ್ ಆಯ್ಕೆಯಾಗಿದ್ದು, ಈಗ ಅವರ ಅವಧಿ ಪೂರ್ಣಗೊಂಡಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಮೀಸಲು ಬಂದಿದ್ದು, ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರೊಬ್ಬರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಮುಸ್ಲಿಂ ಅಭ್ಯರ್ಥಿಯನ್ನು ಮೇಯರ್ ಮಾಡಲು ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಕಾಂಗ್ರೆಸ್ಸಿಗರು ಬಿಂಬಿಸುತ್ತಿದ್ದಾರೆ. ಇವರಿಗೆ ನಿಜವಾಗಿಯೂ ಮುಸ್ಲಿಂ ಸಮಾಜದವರನ್ನು ಮೇಯರ್ ಮಾಡುವ ಉದ್ದೇಶವಿದ್ದರೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ನೇಮಕ ಮಾಡಬಹುದಿತ್ತು. ಆದರೆ, ಕಾಂಗ್ರೆಸ್‌ನವರಿಗೆ ಮುಸ್ಲಿಂ ಅಭ್ಯರ್ಥಿಯನ್ನು ಮೇಯರ್ ಮಾಡುವ ಯಾವ ಉದ್ದೇಶವಿಲ್ಲ. ಜನರಲ್ಲಿ ಗೊಂದಲ ಮೂಡಿಸಲು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.ಮೇಯರ್ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂಬ ಕಾಂಗ್ರೆಸ್‌ನ ಹುಸಿ ಪ್ರೀತಿ ಎಲ್ಲರಿಗೂ ಅರ್ಥವಾಗುತ್ತದೆ. ಇವರಿಗೆ ನಿಜಕ್ಕೂ ದಲಿತ, ಹಿಂದುಳಿದ, ದಲಿತಪರ ಕಾಳಜಿಯಿದ್ದರೆ ಸದ್ಯ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನವನ್ನು ಮುಸ್ಲಿಂರಿಗೆ ನೀಡಲಿ ಎಂದು ಇಬ್ರಾಹಿಂ ಬಾಬು ಆಗ್ರಹಿಸಿದರು.
ಬಳ್ಳಾರಿಯಲ್ಲಿ ಮಟ್ಕಾ, ಜೂಜಾಟ, ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಯುವ ಸಮುದಾಯ ಹಾದಿ ತಪ್ಪುತ್ತಿದೆ. ಆದರೆ, ಇದರ ನಿಯಂತ್ರಣವಿಲ್ಲದಂತಾಗಿದೆ. ಬಳ್ಳಾರಿಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹಾದಿ ತಪ್ಪಿದೆ ಎಂದು ಬಿಜೆಪಿ ಪಾಲಿಕೆ ಸದಸ್ಯರು ದೂರಿದರು. ಹಗಲು ರಾತ್ರಿ ಎನ್ನದೆ ಮಟ್ಕಾ, ಜೂಜಾಟ ನಡೆಯುತ್ತಿದೆ. ಇಸ್ಪೀಟ್ ಕ್ಲಬ್‌ಗಳು ನಿರಾತಂಕವಾಗಿ ನಡೆದಿವೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಗ್ರಾಮೀಣ ಭಾಗದ ಜನರು ಹೊಲೆ ಮನೆ ಮಾರಿಕೊಂಡು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಬಳ್ಳಾರಿ ನಗರ ಸಂಪೂರ್ಣ ಹಾದಿ ತಪ್ಪಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ನ ಶಾಸಕರು, ಸಂಸದರು ಪಾಲಿಕೆಯತ್ತ ಗಮನ ಹರಿಸಬೇಕು. ಪಾಲಿಕೆ ದುರಾಡಳಿತ ವಿರುದ್ಧ ಹೋರಾಟ ಮಾಡಿದರೂ ದಪ್ಪಚರ್ಮದ ಕಾಂಗ್ರೆಸ್ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.