ಹಾವೇರಿ: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ ಒಳಗಾಗಿ 11 ಜನರು ಸಾವಿಗೀಡಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯತೆ ಖಂಡಿಸಿ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ಮುಖಂಡರು, ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆಯಲ್ಲಿ 11 ಕ್ರೀಡಾಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಹುನ್ನಾರ ನಡೆಸಿದೆ. ಸರ್ಕಾರ ತಮ್ಮ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳಲು, ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ 11 ಜನರ ಸಾವಿಗೆ ಕಾರಣವಾಗಿದೆ. ತಮ್ಮ ತಪ್ಪಿಗೆ ಅಧಿಕಾರಿಗಳನ್ನು ದೂಷಿಸಿ ಅಮಾನತು ಶಿಕ್ಷೆ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿಗಳಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.ಯಾವ ರೀತಿಯಲ್ಲಿ ವಿಜಯೋತ್ಸವ ಮಾಡಬೇಕು, ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿವೇಚನೆ ಇಲ್ಲದ ಸರ್ಕಾರ ಇದಾಗಿದೆ. ತರಾತುರಿಯಲ್ಲಿ ಕಾರ್ಯಕ್ರಮ ಮಾಡಿದ್ದು, ದುರಾಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಮೃತ ಅಭಿಮಾನಿಗಳಿಗೆ ದೊಡ್ಡ ಮೊತ್ತದ ಪರಿಹಾರ ಕೂಡ ಕೊಟ್ಟಿಲ್ಲ. ರಾಜ್ಯದ ಇತಿಹಾಸದಲ್ಲೇ ಘೋರ ಸಾವಿನ ಘಟನೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಪರಮೇಶ್ವರ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಮತ್ತೊಮ್ಮೆ ಜನಾದೇಶ ಪಡೆದು ಆಡಳಿತ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೂತನ ಜಿಲ್ಲಾಧ್ಯಕ್ಷರಾದ ಬಳಿಕ ಮೊದಲನೇ ಬಾರಿ ನಡೆದ ಪ್ರತಿಭಟನೆ ಇದಾಗಿದ್ದು, ಹಲವು ವಿಶೇಷತೆಗೆ ಸಾಕ್ಷಿಯಾಯಿತು. ನಿಕಟಪೂರ್ವ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಅವಧಿಯಲ್ಲಿ ಪಕ್ಷದ ಆಂತರಿಕ ಘಟನಾವಳಿಗಳಿಂದ ಬೇಸತ್ತು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಹಲವು ಬಿಜೆಪಿ ಮುಖಂಡರು, ಹಾವೇರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ, ಬಸವರಾಜ ಕಳಸೂರ, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಪರಮೇಶ್ವರಪ್ಪ ಮೇಗಳಮನಿ, ವೆಂಕಟೇಶ ನಾರಾಯಣಿ, ಶಹರ ಬಿಜೆಪಿ ಅಧ್ಯಕ್ಷ ಗಿರೀಶ ತುಪ್ಪದ, ಕಿರಣ ಕೋಣನವರ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ರುದ್ರೇಶ ಚಿನ್ನಣ್ಣನವರ, ಜಗದೀಶ ಮಲಗೋಡ, ಶಿವಯೋಗಿ ಹುಲಿಕಂತಿಮಠ, ಮಂಜುನಾಥ ಮಡಿವಾಳರ, ನಿರಂಜನ ಹೇರೂರ, ಮೃತ್ಯುಂಜಯ ಮುಷ್ಠಿ, ಶಂಭು ಹತ್ತಿ, ಗಿರೀಶ ಶೆಟ್ಟರ, ಲಲಿತಾ ಗುಂಡೇನಹಳ್ಳಿ, ಚೆನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ, ಅಭಿಷೇಕ ಗುಡಗೂರ, ಗುಡ್ಡಪ್ಪ ಭರಡಿ, ಮನೋಜ ಜಾಧವ, ವಿನಯ ತಹಸೀಲ್ದಾರ, ಮಂಜು ಮಲಗೋಡ ಪಾಲ್ಗೊಂಡಿದ್ದರು.