ರಾಮಮಂದಿರದ ಯಶಸ್ಸಿನ ಪಾಲು ಪಡೆಯಲು ಕಾಂಗ್ರೆಸ್‌ ಯತ್ನ: ಪ್ರಹ್ಲಾದ ಜೋಶಿ ಟೀಕೆ

KannadaprabhaNewsNetwork | Updated : Jan 10 2024, 02:20 PM IST

ಸಾರಾಂಶ

ಕಾಂಗ್ರೆಸ್ ನವರು ನಾವು ರಾಮನ ಭಕ್ತರು, ನಮ್ಮ ಯೋಜನೆ ಅಕ್ಕಿಯೇ ಮಂತ್ರಾಕ್ಷತೆಗೆ ಬಳಸುತ್ತಿದ್ದಾರೆ ಎಂದು ಕ್ರೆಡಿಟ್‌ ಪಡೆಯಲು ಮುಂದಾಗುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದ, ಶ್ರೀರಾಮಜನ್ಮಭೂಮಿ ಕುರಿತು ಯಾವುದೇ ನಿರ್ಣಯ ಕೈಗೊಳ್ಳಬಾರದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಕಾಂಗ್ರೆಸ್ಸಿನವರು ಇಂದು ರಾಮ ಮಂದಿರದ ಯಶಸ್ಸಿನ ಪಾಲು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮಮಂದಿರ ಉದ್ಘಾಟನೆ ಆಹ್ವಾನ ಪತ್ರಿಕೆ ಜತೆ ನೀಡುತ್ತಿರುವ ಮಂತ್ರಾಕ್ಷತೆ ರಾಜ್ಯ ಸರಕಾರದ ಅನ್ನಭಾಗ್ಯದ ಅಕ್ಕಿ ಎಂದು ಹೇಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರ ಈ ವರೆಗೆ ಒಂದೇ ಒಂದು ಅಕ್ಕಿ ಕಾಳನ್ನು ಕೊಟ್ಟಿಲ್ಲ. ಚುನಾವಣೆ ವೇಳೆ ಘೋಷಿಸಿರುವ 10 ಕೆಜಿ ಅಕ್ಕಿಯನ್ನು ಸಹ ನೀಡಿಲ್ಲ. ಈಗ ಮಂತ್ರಾಕ್ಷತೆಗೆ ರಾಜ್ಯ ಸರಕಾರದ ಯೋಜನೆ ಅಕ್ಕಿ ಬಳಸಲಾಗುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

ಈ ಹಿಂದೆ ಶ್ರೀರಾಮ ಕಾಲ್ಪನಿಕ, ರಾಮಾಯಣ ನಡೆದ ಬಗ್ಗೆ ಪುರಾವೆ ಇಲ್ಲ ಎಂದು ಹೇಳುತ್ತಿದ್ದವರು, ಇದೀಗ ನಾವು ರಾಮನ ಭಕ್ತರು, ನಮ್ಮ ಯೋಜನೆ ಅಕ್ಕಿಯೇ ಮಂತ್ರಾಕ್ಷತೆಗೆ ಬಳಸುತ್ತಿದ್ದಾರೆ ಎಂದು ಕ್ರೆಡಿಟ್‌ ಪಡೆಯಲು ಮುಂದಾಗುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಬುದ್ಧಿವಂತರಿದ್ದು, ಎಲ್ಲವನ್ನು ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಿದ್ದು ಗೇಮ್‌ ಪ್ಲ್ಯಾನ್‌: ರಾಜ್ಯ ಸರ್ಕಾರದಲ್ಲಿ ಹೊಸ ಡಿಸಿಎಂ ಸೃಷ್ಟಿ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯೆನೀಡಿದ ಅವರು, ಇದೆಲ್ಲವೂ ಸಿದ್ದರಾಮಯ್ಯ ಗೇಮ್‌ ಪ್ಲ್ಯಾನ್‌ ಅಷ್ಟೇ. ಡಿ.ಕೆ.ಶಿವಕುಮಾರ ಅವರನ್ನು ಸೈಡ್‌ಲೈನ್‌ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ವ್ಯವಸ್ಥಿತವಾಗಿ ಬಲೆ ಹೆಣೆದು ಡಿ.ಕೆ.ಶಿವಕುಮಾರ ಅವರನ್ನು ಮಟ್ಟಹಾಕುವ ಉದ್ದೇಶ ಸಿದ್ದರಾಮಯ್ಯ ಅವರದ್ದು ಎಂದರು.

ಎರಡೂವರೆ ವರ್ಷದ ಪವರ್‌ ಶೇರಿಂಗ್‌ ಬಗ್ಗೆ ನಮಗೂ ಕಾಂಗ್ರೆಸ್ಸಿಗರಿಂದ ಮಾಹಿತಿ ಬಂದಿದೆ. ಈ ಅಧಿಕಾರ ಹಂಚಿಕೆ ವಿಚಾರವನ್ನು ಈಗಲೇ ಹತ್ತಿಕ್ಕುವ ಉದ್ದೇಶದಿಂದ ಈ ರೀತಿ ವಿವಾದ ಸೃಷ್ಟಿ ಮಾಡಲಾಗುತ್ತಿದೆ ಎಂದರು.

ಈಗಲೂ ಬದ್ಧ: ರಾಜ್ಯ ಸರ್ಕಾರ ಐಸಿಸ್ ಆಡಳಿತ ನಡೆಸುತ್ತಿದೆ ಎನ್ನುವ ತಮ್ಮ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸರ್ಕಾರ ಅವರದೇ ಇದೆ. ಮತ್ತೇಕೆ ಪ್ರತಿಭಟನೆ ನಡೆಸಬೇಕು. ಮೊನ್ನೆಯಷ್ಟೇ ಬಿಜೆಪಿ ನಾಯಕರ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ಹಿಂದೂಗಳನ್ನು ವಿನಾಕಾರಣ ಬಂಧಿಸುವ ಮೂಲಕ ಕಾಂಗ್ರೆಸ್‌ ಇಂತಹ ಆಡಳಿತ ನಡೆಸುತ್ತಿದೆ. ಹೀಗಾಗಿ ಇದು ಐಸಿಸ್‌ ಸರ್ಕಾರ ಎಂದು ಕಿಡಿಕಾರಿದರು.

Share this article