ಖಾಜು ಸಿಂಗೆಗೋಳ
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಘಾಟು ಜೋರಾಗಿದೆ. ಅದು ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ವಾದವಲ್ಲ. ಆದರೆ, ಅದನ್ನು ನಿಯಂತ್ರಿಸಬೇಕಾದ ಅಗತ್ಯ ಸಿಬ್ಬಂದಿಯ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಸಹಜವಾಗಿ ಅಕ್ರಮ ದಂಧೆಕೋರರಿಗೆ ಸಿಬ್ಬಂದಿ ಕೊರತೆ ಕೂಡ ವರವಾಗಿ ಪರಿಣಮಿಸಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯನ್ನು ಹಂಚಿಕೊಂಡಿದೆ ಇಂಡಿ ಮತ್ತು ಚಡಚಣ ತಾಲೂಕು. ಎರಡು ಭಾಗಗಳಿಂದ ಅಕ್ರಮವಾಗಿ ಸಾಗಿಸುವ ಮದ್ಯವನ್ನು ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಅಧಿಕಾರಿಗಳ ಕಣ್ತಪ್ಪಿಸಿ ಲೀಲಾಜಾಲವಾಗಿ ಮಾರಾಟ ಮಾರುತ್ತಿದ್ದಾರೆ ಎಂಬುದು ಸಾರ್ವಜನಿಕರ ಗಂಭೀರ ಆರೋಪ. ಅಗತ್ಯ ಸಿಬ್ಬಂದಿ ಇದ್ದಿದ್ದರೆ ಅಕ್ರಮ ಮಾರಾಟ ಸಂಪೂರ್ಣ ನಿಯಂತ್ರಣಕ್ಕೆ ಬಾರದಿದ್ದರೂ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿತ್ತು ಎಂದು ಸಾರ್ವಜನಿಕರೇ ಒಪ್ಪಿಕೊಳ್ಳುತ್ತಿದ್ದಾರೆ.ಅಕ್ರಮ ಮದ್ಯ ಮಾರಾಟ ನಿಯಂತ್ರಣವೇ ದೊಡ್ಡ ಸವಾಲು:
ಪೊಲೀಸರಿಂದಲೇ ಪರಿಸ್ಥಿತಿ ಹೀಗಿರುವಾಗ ಇನ್ನು ಇಂಡಿ, ಚಡಚಣ ತಾಲೂಕುಗಳು ಸೇರಿ ಅಬಕಾರಿ ಇಲಾಖೆಗೆ ಒಬ್ಬ ಸಿಪಿಐ, ಪಿಎಸೈ ಹಾಗೂ 3 ಜನ ಅಬಕಾರಿ ಪೊಲೀಸರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಎರಡು ತಾಲೂಕುಗಳಲ್ಲಿ ನಡೆಯುವ ಅಕ್ರಮ ಸಾರಾಯಿ ಮಾರಾಟ ದಂಧೆ ನಿಯಂತ್ರಿಸಲು ಹೇಗೆ ಸಾಧ್ಯ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೀಗಾಗಿ ಅಕ್ರಮ ಸರಾಯಿ ಮಾರಾಟ ನಿಯಂತ್ರಣಕ್ಕೆ ಇಂಡಿಗೆ ಅಬಕಾರಿ ಉಪ ವಿಭಾಗದ ಕಚೇರಿಯನ್ನು ಆರಂಭಿಸಿ ಎರಡು ತಾಲುಕುಗಳಲ್ಲಿ ನಡೆಯುವ ಅಕ್ರಮ ಸರಾಯಿ ದಂಧೆ ನಿಯಂತ್ರಣಕ್ಕೆ ಬೇಕಾದ ಅಬಕಾರಿ ಪಿಎಸೈಗಳು ಹಾಗೂ ಪೊಲೀಸರನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಎರಡೂ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ, ಗಾಂಜಾ, ಅಫೀಮು ಸೇರಿದಂತೆ ಇತರೆ ಮಾದಕ ವಸ್ತುಗಳ ಮಾರಾಟ ದಂದೆಗೆ ಕಡಿವಾಣ ಇಲ್ಲದಿರುವುದರಿಂದ ಅದು ಯುವಜನರ ಮೇಲೆ ಪರಿಣಾಮ ಬೀರುತ್ತಿದೆ. ಅವರ ಆರೋಗ್ಯಕ್ಕೂ ಕುತ್ತು ತರುತ್ತಿದೆ. ಈ ಮೂಲಕ ಯುವಕರಲ್ಲಿ ಅಪರಾಧಿಕ ಚಟುವಟಿಕೆಗಳ ಹೆಚ್ಚಳಕ್ಕೂ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂಬ ಕಳವಳ ಕೂಡ ಪೋಷಕರನ್ನು ಕಾಡುತ್ತಿದೆ. ಹೀಗಾಗಿ ಇಂತಹ ಅಕ್ರಮಗಳನ್ನು ನಿಯಂತ್ರಿಸಲು ಇಂಡಿ ತಾಲೂಕು ಕೇಂದ್ರಕ್ಕೆ ಅಬಕಾರಿ ಉಪ ವಿಭಾಗದ ಅಬಕಾರಿ ಉಪಾಧೀಕ್ಷಕರ ಕಚೇರಿ ಹಾಗೂ ಅಬಕಾರಿ ಮಹಿಳಾ ಪೊಲೀಸ್ ಠಾಣೆ ಆರಂಭಿಸುವುದು ಅತೀ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
--------------------
- ರಾಹುಲ್ ನಾಯಕ ಅಬಕಾರಿ ಸಿಪಿಐ, ಇಂಡಿ